ಡೈಲಿ ವಾರ್ತೆ: 11 ನವಂಬರ್ 2022

ಖ್ಯಾತ ಗಣಿತ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ.ಆರ್‌.ಎಲ್‌.ಕಶ್ಯಪ್‌ ನಿಧನ

ಬೆಂಗಳೂರು: ಖ್ಯಾತ ಗಣಿತ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ.ಆರ್‌.ಎಲ್‌.ಕಶ್ಯಪ್(ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್‌)‌ ನಿಧನರಾಗಿದ್ದಾರೆ.

ವೇದಗಳ ಅಧ್ಯಯನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಅವರು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಸ್ವಗೃಹದಲ್ಲಿ ಬೆಳಗ್ಗೆ 10.30ಕ್ಕೆ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕಶ್ಯಪ್‌ ಅವರು ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಬಿ.ಎಸ್ಸಿ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಎಂ.ಎಸ್‌.ಸಿ, ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್‌ ವಿಷಯದಲ್ಲಿ ಪಿ.ಎಚ್‌.ಡಿ. ಪಡೆದಿದ್ದರು. ಅಮೇರಿಕದ ಪರ್ಡ್‌ಯೂ ವಿ.ವಿ.ಯಲ್ಲಿ ಮೂರು ದಶಕಗಳ ಕಾಲ ಎಲೆಕ್ಟ್ರಿಕಲ್‌ ಹಾಗೂ ಕಂಪ್ಯೂಟರ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಸಂಶೋಧನಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು 350ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಐವತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿ ಆಗಿದ್ದರು.

ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ, ಪ್ರಸಾರ ಕಾರ್ಯಕ್ಕೆ ಇವರು ನೀಡಿದ ಕೊಡುಗೆಯನ್ನ ಸ್ಮರಿಸಿ ಕೇಂದ್ರ ಸರ್ಕಾರ 2003ರಲ್ಲಿ “ವೇದಾಂಗ ವಿದ್ವಾನ್‌’ ಪ್ರಶಸ್ತಿ ನೀಡಿ ಗೌರವಿಸಿದೆ. ಜತೆಗೆ ರಾಜ್ಯ ಸರ್ಕಾರ 2012ರಲ್ಲಿ ” ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಸನ್ಮಾನಿಸಿವೆ. ಭಾರತೀಯ ವಿದ್ಯಾಭವನ, ಬೆಂಗಳೂರು “ವೇದ ಬ್ರಹ್ಮ’ ಪುರಸ್ಕಾರದೊಂದಿಗೆ ಸತ್ಕರಿಸಿದೆ. ಜತೆಗೆ 2021ರಲ್ಲಿ “ಪದ್ಮಶ್ರೀ’ ಪ್ರಶಸ್ತಿಗೂ ಕಶ್ಯಪ್‌ ಭಾಜನರಾಗಿದ್ದರು.