ಡೈಲಿ ವಾರ್ತೆ: 01 ಡಿಸೆಂಬರ್ 2022

ಡಿ. 5ರಿಂದ ಮೆದುಳು ಜ್ವರದ ವಿರುದ್ಧ ಮಕ್ಕಳಿಗೆ ಲಸಿಕಾ ಅಭಿಯಾನ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್

ಉಡುಪಿ: ಮಕ್ಕಳಲ್ಲಿ ಜಪಾನೀಸ್ ಎನ್‌ಸೆಫೆಲೈಟಿಸ್‌ (ಮೆದುಳು ಜ್ವರ- ಜೆ.ಇ.) ರೋಗ ಕಾಣಿಸಿಕೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಡಿ.5ರಿಂದ 24ರವರೆಗೆ ಒಂದರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1ರಿಂದ 15 ವರ್ಷ ದೊಳಗಿನ ಒಟ್ಟು 2,18,324 ಮಕ್ಕಳನ್ನು ಗುರುತಿಸಲಾಗಿದ್ದು, ಈ ಎಲ್ಲರಿಗೂ ಒಂದು ಸುತ್ತಿನ ಲಸಿಕೆಯನ್ನು ನೀಡಲಾಗುವುದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಳ ಸಹಯೋಗದಲ್ಲಿ ಜೆ.ಇ. ಲಸಿಕಾ ಅಭಿಯಾನವನ್ನು ನಡೆಸಲಾಗುತ್ತಿದೆ.

ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಡಿ.5ರಂದು ಬೆಳಗ್ಗೆ 10 ಗಂಟೆಗೆ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ (ಬೋರ್ಡ್ ಹೈಸ್ಕೂಲ್) ಇಲ್ಲಿ ಚಾಲನೆ ನೀಡಲಾಗುವುದು.

ಡಿ.5ರಿಂದ 11ರವರೆಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ, ಡಿ.12ರಿಂದ 18ರವರೆಗೆ ಎಲ್ಲಾ ಅಂಗನವಾಡಿಗಳಲ್ಲಿ ಹಾಗೂ ಡಿ.19ರಿಂದ 24ರವರೆಗೆ ಮನೆ ಮನೆಗೆ ತೆರಳಿ, ಸಮುದಾಯಗಳಲ್ಲಿರುವ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.