ವರದಿ-ಕುಮಾರ ನಾಯ್ಕ.ಉಪಸಂಪಾದಕರು

ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಕೆಲಸ ಮಾಡುವ ಬಾಂಗ್ಲಾದೇಶಿ ವಲಸಿಗರನ್ನು ಹತ್ತಿಕ್ಕಲು ಕ್ರಮಕೈಗೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಅಕ್ರಮ ನಿವಾಸಿಗಳು ದೇಶದ ಆಂತರಿಕ ಭದ್ರತೆಗೆ ಅಪಾಯವನ್ನುಂಟು ಮಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರಿಂದ ಸಮೀಕ್ಷೆ ನಡೆಯುತ್ತಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಅದರಲ್ಲೂ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ ಎಂದರು.

“ಅವರನ್ನು ಪತ್ತೆಹಚ್ಚಲು ಮತ್ತು ಅವರನ್ನು ಬಂಧಿಸಲು ವಿಶೇಷ ಪ್ರಯತ್ನಗಳು ಮತ್ತು ಸಿದ್ಧತೆಗಳು ನಡೆಯುತ್ತಿವೆ” ಎಂದು ಜ್ಞಾನೇಂದ್ರ ಗುರುವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


ಬಾಂಗ್ಲಾದೇಶಿ ವಲಸಿಗರು ಭಾರತಕ್ಕೆ ನುಸುಳಿದ ನಂತರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಪಡಿತರ ಚೀಟಿಗಳು, ಮತದಾರರ ಗುರುತಿನ ಚೀಟಿಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದೊಂದು ದೊಡ್ಡ ದಂಧೆಯಾಗಿದ್ದು, ಈ ಜಾಲಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಇದು ನಮ್ಮ ದೇಶದ ಭದ್ರತೆಗೆ ಅಪಾಯ ತಂದೊಡ್ಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಪೊಲೀಸರು ಬ್ಯಾಂಕ್ ಆಡಳಿತಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ.

ಸೈಬರ್ ಅಪರಾಧಗಳನ್ನು ನಿಭಾಯಿಸಲು ರಾಜ್ಯದ ಸಿಬ್ಬಂದಿಗೆ ತರಬೇತಿ ನೀಡುವ ಕುರಿತು ಕರ್ನಾಟಕ ಸರ್ಕಾರವು ಗುಜರಾತ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದಿದ್ದಾರೆ.

“ನಾವು ನಮ್ಮ ಸೈಬರ್ ಸೆಲ್‌ನಲ್ಲಿ ಕೆಲಸ ಮಾಡುವ 60 ಪೊಲೀಸ್ ಸಿಬ್ಬಂದಿಯನ್ನು ತರಬೇತಿಗಾಗಿ ಗುಜರಾತ್‌ಗೆ ಕಳುಹಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.

ಡ್ರಗ್ಸ್ ಹಾವಳಿ ಕುರಿತು, ಕರ್ನಾಟಕ ಪೊಲೀಸರು ಕೇಂದ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದು, ಇಂತಹ ಚಟುವಟಿಕೆಗಳನ್ನು ತಡೆಯಲು ನೆರೆಯ ರಾಜ್ಯಗಳೊಂದಿಗೆ ಸಮನ್ವಯವನ್ನು ಬಲಪಡಿಸಲಾಗುತ್ತಿದೆ ಎಂದಿದ್ದಾರೆ.