ವರದಿ : ಗಣೇಶ್ ಹಾರಿಗೆ ಬ್ಯಾಕೊಡು


ಸಾಗರ : ದೀಪದ ಅಡಿ ಕತ್ತಲು ಎನ್ನುವಂತೆ ನಾಡಿಗೆ ಬೆಳಕು ನೀಡಿದ ಸಾಗರ ತಾಲೂಕಿನ ಕರೂರು-ಬಾರಂಗಿ ಹೋಬಳಿಗಳು ಬಹುಮುಖ್ಯ ಮೂಲಭೂತ ಸೌಕರ್ಯಗಳ ಕೊರತೆಗೆ ತಾರ್ಕಿಕ ಅಂತ್ಯ ಕಾಣದಂತೆ ಆಗಿದೆ.

ರಾಜ್ಯಕ್ಕೆ ವಿದ್ಯುತ್ ಕೊಡಲು ಸಂತ್ರಸ್ತರಾದ ದ್ವೀಪದಲ್ಲಿ ಇನ್ನೂ ನೂರಾರು ಕುಟುಂಬಗಳು ವಿದ್ಯುತ್ ವಂಚಿತವಾಗಿವೆ. ದ್ವೀಪದ ಎಸ್ ಎಸ್ ಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣುಬಿ ಬುಡುಕಟ್ಟು ಜನರೇ ವಾಸ ಮಾಡುವ ಮುರಳ್ಳಿ ಹಳ್ಳಿಯ 20 ಕ್ಕೂ ಹೆಚ್ಚು ಮನೆಗಳು ವಿದ್ಯುತ್ ಇಲ್ಲದೆ ಚಿಮುಣಿ ಬುರುಡಿಯಲ್ಲಿ ಕಳೆಯುತ್ತಾ ಇವೆ.

ಶಾಲಾ ಮಕ್ಕಳು ಓದುತ್ತಾ ಇದ್ದರೂ, ದೀನ ದಯಾಳು ಯೋಜನೆ ಜಾರಿ ಇದ್ದರೂ ಈ ಲೋಪಕ್ಕೆ ಯಾರು ಕಾರಣ ಎನ್ನುವುದೇ ಒಗಟಾಗಿದೆ.

ಈ ನಡುವೆ ದ್ವೀಪದ ಕೆಲವು ಹಳ್ಳಿಗಳಿಗೆ ಸುಸಜ್ಜಿತ ರಸ್ತೆ ಸೌಲಭ್ಯದಿಂದ ವಂಚಿತವಾಗಿವೆ. ಕುದುರೂರು ಗ್ರಾ ಪಂ ವ್ಯಾಪ್ತಿಯ ಆಗ್ಗೆರಿ, ತಲ್ಲೇ , ಎಸ್ ಎಸ್ ಭೋಗ್ ಪಂಚಾಯಿತಿ ವಳುರು, ಚನ್ನಗೊಂಡ ಪಂಚಾಯಿತಿ ಮೇಘಾನೆ ಹಳ್ಳಿಗಳಿಗೆ ಈವರೆಗೂ ಸಮರ್ಪಕ ಸಂಪರ್ಕ ವ್ಯವಸ್ಥೆಯೇ ಇಲ್ಲವಾಗಿದೆ.

ಸರ್ಕಾರದ ಮನೆ ಬಾಗಿಲಿಗೆ ಆರೋಗ್ಯ ಸೇವೆ 108, ರೇಷನ್ ಪಡೆಯಲು, ಬ್ಯಾಂಕ್ ಸೇವೆ ಪಡೆಯಲು, ಕೃಷಿ ಚಟುವಟಿಕೆಗೆ ತಲೆ ಹೊರೆಯು ಕೆಲ ಕಡೆ ಅನಿವಾರ್ಯವಾಗಿದೆ. ದಾರಿ ಯಾವಾಗ ತೆರೆಯುವುದು ಎಂಬುದು ಪ್ರಶ್ನೆಯಾಗಿದೆ.

ದ್ವೀಪದ ಎರಡು ಆಸ್ಪತ್ರೆಗಳಲಿ ಖಾಲಿ ಹುದ್ದೆಗಳು ಹಾಗೆ ಉಳಿದಿವೆ. ಬ್ಯಾಕೊಡಿನಲ್ಲಿ 2002 ರ ಹೊತ್ತಿಗೆ ಕಾಗೋಡು ತಿಮ್ಮಪ್ಪನವರು ಆರೋಗ್ಯ ಮಂತ್ರಿ ಅವಧಿಯಲ್ಲಿ ಸುಸಜ್ಜಿತ ಆಪರೇಷನ್ ಕೊಠಡಿ ಮತ್ತು ಮಹಿಳಾ ಪುರುಷ ಪ್ರತ್ಯೇಕ ವಾರ್ಡ್ ಹೊಂದಿರುವ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣವಾಯಿತಾದರೂ ಈ ವರೆಗೂ ಪ್ರಸೂತಿ ತಜ್ಞರು ಒಮ್ಮೆಯೂ ನೇಮಕಾತಿ ಆಗಿಲ್ಲ.

ದಶಕದಿಂದ ತುಮರಿ ಮತ್ತು ಬ್ಯಾಕೊಡು ಪಿ ಹೆಚ್ ಸಿ ಗಳಿಗೆ ಕನಿಷ್ಠ ಎಂ ಬಿ ಬಿ ಎಸ್ ವೈದ್ಯರ ಸೇವೆಯೂ ಲಭ್ಯವಾಗಿಲ್ಲ. ಹಳ್ಳಿಗಳಲ್ಲಿ ಇರುವ ಉಪಕೇಂದ್ರಗಳು ನೇಮಕಾತಿ ಇಲ್ಲದೆ ಹಾಳು ಸುರಿಯುತ್ತಾ ಇವೆ. ಕೆಲವು ಕಟ್ಟಡ ದುರಸ್ತಿ ಇಲ್ಲದೆ ಶಿಥಿಲಗೊಂಡಿವೆ. ಈ ಕಾರಣ ಗ್ರಾಮೀಣ ಆರೋಗ್ಯ ಸೇವೆ ದ್ವೀಪದ ಹಳ್ಳಿಗಳಿಗೆ ಮರೀಚಿಕೆಯಾಗಿದೆ.

ಕರೂರು ಹೋಬಳಿಯ ಹಳ್ಳಿಗಳಲ್ಲಿ ಅಂಗನವಾಡಿ ಕೊರತೆ ಇವೆ. ತುಮರಿ ಗ್ರಾ ಪಂ ದುರ್ಗಮ ಹಳ್ಳಿ ಏಳಿಗೆ ಗ್ರಾಮದಲ್ಲಿ ಮಿನಿ ಅಂಗನವಾಡಿ ಬೇಡಿಕೆಗೆ ದಶಕವೇ ಕಳೆದರೂ ಈಡೇರದೆ ಜನರೇ ಮನೆ ಕಟ್ಟಿ ಟೀಚರ್ ನೇಮಿಸಿ ತಮ್ಮ ಹಣದಿಂದ ಅಂಗನವಾಡಿ ನಡೆಸುತ್ತಾ ಇದ್ದಾರೆ. ತುಮರಿ ಪಂಚಾಯಿತಿ ಕಳಸವಳ್ಳಿ ಲೇಬರ್ ಕ್ಯಾಂಪ್ 30 ಕ್ಕೂ ಹೆಚ್ಚು ಮಕ್ಕಳು 3 ಕಿ ಮೀ ದೂರದ ಚುಟ್ಟಿಕೇರಿ ಗೆ ಕ್ರಮಿಸಲು ಆಗದೇ ಮನೆಯಲೇ ಉಳಿದಿದ್ದಾರೆ.

ಕುದುರೂರು ಮತ್ತು ಎಸ್ ಎಸ್ ಭೋಗ ಪಂಚಾಯಿತಿಯ ಸುಳಿಮನೆ ಮಿಂಚ, ತಲ್ಲೇ, ಆಗ್ಗೆರಿ, ಮುರಲ್ಲಿ ಗ್ರಾಮಗಳದ್ದು ಇದೆ ವ್ಯಥೆಯಾಗಿದೆ. ಎಸ್ ಎಸ್ ಭೋಗ್ ಪಂಚಾಯಿತಿ ಕೊಡಚಾದ್ರಿ ಪರ್ವತದ ಅಂಚಿನ ಹಳ್ಳಿಯಾದ ವಳೂರು ಗ್ರಾಮದ ಮಕ್ಕಳು ಅಂಗನವಾಡಿಗೆ 9 ಕೀ ಕ್ರಮಿಸಬೇಕಿದೆ.

ಪಶ್ಚಿಮ ಘಟ್ಟದ ಅಂಚಿನಲ್ಲಿ ಇರುವ ಕರೂರು ಬಾರಂಗಿ ಹೋಬಳಿಯಲ್ಲಿ ಸಣ್ಣ ಹಳ್ಳಗಳು ರಸ್ತೆಗೆ ಅಡ್ಡಲಾಗಿ ಹರಿಯುವುದು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ಹಳ್ಳ ಹೊಳೆಯಾಗಿ ಹರಿಯುತ್ತದೆ. ಈ ಕಾರಣ ಹಳ್ಳಿಗಳಿಗೆ ಕಾಲು ಸಂಕ ಅನಿವಾರ್ಯವಿದೆ. ಚನ್ನಗೊಂಡ ಪಂಚಾಯಿತಿ ಪಡುಬೀಡು ಗ್ರಾಮದ ಮರದ ಕಾಲುಸಂಕದ ಮೇಲೆ ಜೀವ ಕೈ ಹಿಡಿದು ಮಕ್ಕಳು ಶಾಲೆಗೆ ಹೋಗುತ್ತಾ ಇದ್ದರೂ ಶಾಲಾ ಸೇತು ಭಾಗ್ಯದ ಅಡಿಯಲ್ಲಿ ಇವರಿಗೆ ಸುಸಜ್ಜಿತ ಸಂಪರ್ಕ ಸಾಧ್ಯವಾಗಿಲ್ಲ, ಬಾನುಕುಳಿ ಪಂಚಾಯಿತಿಯ ಉರಳಗಲ್ಲು , ತುಮರಿ ಪಂಚಾಯಿತಿ ಏಳಿಗೆ ಗ್ರಾಮಗಳದ್ದು ಇದೆ ಕಥೆಯಾಗಿದೆ.

ಇವೆಲ್ಲವುಗಳ ನಡುವೆ ನೆಟ್ವರ್ಕ್ ಹೋರಾಟ ಕಾವು ಪಡೆದುಕೊಂಡಿದೆ. ಸರ್ಕಾರದ ಬೊಕ್ಕಸದಲ್ಲಿ ನಮ್ಮ ತ್ಯಾಗದ ಋಣವಿದೆ ಈ ಕಾರಣ ಲಾಭ ನಷ್ಟ ಮೀರಿ ನಮ್ಮ ಹಳ್ಳಿಗಳಿಗೆ ನೆಟ್ವರ್ಕ್ ಕೊಡಿ ಎಂಬ ಹಕ್ಕೊತ್ತಾಯದೊಂದಿಗೆ ‘ ನೋ ನೆಟ್ವರ್ಕ್ ನೋ ವೋಟಿಂಗ್” ಅಭಿಯಾನ ದ್ವೀಪದಲ್ಲಿ ಆರಂಭಗೊಂಡು ಬಾರಂಗಿ ಹೋಬಳಿಯಲ್ಲಿ ಪಾದಯಾತ್ರೆ ಕೂಡ ನಡೆದಿದೆ. ಆದರೆ ಸರ್ಕಾರ ಮಾತ್ರ ಹೋರಾಟದ ಜನರ ಬೇಡಿಕೆ ಕಡೆ ತಿರುಗಿಯೂ ನೋಡಿಲ್ಲ. ನೆಟ್ವರ್ಕ್ ಇಲ್ಲದೆ ಆನ್ಲೈನ್ ತರಗತಿ, ವರ್ಕ ಫ್ರಮ್ ಹೋಮ್, ಆರೋಗ್ಯ, ರೇಷನ್ ಇತ್ಯಾದಿ ಸರ್ಕಾರಿ ಸೇವೆ ಪಡೆಯಲು ಸಾಧ್ಯ ಆಗುತ್ತಾ ಇಲ್ಲ. 25 ಸಾವಿರ ಜನರ ಈ ಬೇಡಿಕೆ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದೆ.

———————————————————————-

“ನಮ್ಮ ಊರಿನಲ್ಲಿ ವಿದ್ಯುತ್ ಇಲ್ಲದ 20 ಮನೆಗಳು ಇವೆ. ಪಂಚಾಯಿತಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದೇವೆ. ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ಹೇಳುತ್ತಾ ಹತ್ತು ವರ್ಷ ಆಯ್ತು. ಯಾವಾಗ ಕರೆಂಟು ಬರುತ್ತದೋ ಗೊತ್ತಿಲ್ಲ”
– ಶಿವಪ್ಪ ಮುರಳ್ಳಿ
ಕುಣುಬಿ ಸಮುದಾಯ ಮುಖಂಡ
———————————————————————-


” ನಮಗೆ ರಸ್ತೆಯೇ ಇಲ್ಲ, ನೂರಾರು ವರ್ಷದಿಂದ ನಮ್ಮ ಹಿರಿಕರ ಕಾಲದಿಂದಲೂ ಬದುಕುತಾ ಇದ್ದೇವೆ, ಇನ್ನಾದರೂ ರಸ್ತೆ ಕಲ್ಪಿಸಿ”
– ಚೌಡಪ್ಪ. ಮೇಗಾನೆ.



” ನಮ್ಮ ಗ್ರಾಮದ 60 ಮನೆಗಳಿಗೆ ವಿದ್ಯುತ್ ಇಲ್ಲ, ಈ ಹಿಂದೆ ದೀನದಯಾಳು ಯೋಜನೆ ಅಡಿಯಲ್ಲಿ ಕರೆಂಟು ಕಂಬ ಇಳಿಸಿದ್ದರು, ಅರಣ್ಯ ಇಲಾಖೆಯವರು ಹುಗಿಯಲು ಬಿಡಲಿಲ್ಲ, ನಾವು ಮೂಲತಃ ಮುಳುಗಡೆ ಸಂತ್ರಸ್ತರು. ನಮಗೆ ನ್ಯಾಯ ಕೊಡಿ”
– ನಾಗರಾಜ್. ಉರುಳುಗಲ್ಲು.



“ನಮ್ಮ ಊರಿನಲ್ಲಿ 35 ಮನೆಯಿವೆ. ಮಕ್ಕಳು ಅಂಗನವಾಡಿ ಹೋಗಬೇಕು ಎಂದರೆ 9 ಕಿ ಮೀಟರ್ ಹೋಗಬೇಕು, ದುರ್ಗಮ ಪ್ರದೇಶದಲ್ಲಿ ಇದು ಸಾಧ್ಯವಿಲ್ಲ. ನಮ್ಮ ಊರಿಗೆ ಅಂಗನವಾಡಿ ಬೇಕು”

– ಮೂಕಾಂಬಿಕಾ
ಪದವೀಧರೆ. ವಳೂರು.



” ಮರದ ಕಾಲು ಸಂಕ ನಾವೇ ಮಾಡಿ ಕೊಂಡಿದ್ದೇವೆ, ಶಾಲಾ ಮಕ್ಕಳು ಮಳೆಗಾಲದಲ್ಲಿ ದಾಟುವಾಗ ಜೀವ ಕೈಲಿ ಹಿಡಿದುಕೊಂಡು ನಾವೇ ಬೆಳಿಗ್ಗೆ ಸಂಜೆ ದಾಟಿಸುತ್ತೇವೆ, ಶಾಲಾ ಮಕ್ಕಳಿಗೆ ಬಂದ ಕಾಲು ಸಂಕ ಯೋಜನೆ ನಮ್ಮೂರಿಗೆ ಬರಲಿಲ್ಲ”
– ರಾಮನಾಯ್ಕ ಪಡುಬೀಡು

-–——————————————————————-

” ಕರ್ನಾಟಕ ರಾಜ್ಯ ಸರ್ಕಾರ ಕಳೆದ 60 ವರ್ಷದಿಂದ ಜಲವಿದ್ಯುತ್ ಆದಾಯ ಪಡೆಯುತ್ತಾ ಇದೆ. ಮುಳುಗಡೆಯಿಂದ ದ್ವೀಪದಲ್ಲಿರುವ ಜನರಿಗೆ ಮಾನವೀಯ ಆಧಾರದಲ್ಲಿ ಈವರೆಗೆ ಯಾವ ಹೆಚ್ಚುವರಿ ಅನುದಾನ ಅಥವಾ ಪ್ಯಾಕೇಜ್ ನೀಡಿಲ್ಲ, ಸರ್ಕಾರ ಇನ್ನಾದರೂ ಈ ಜನರಿಗೆ ನಿಯಮ ಸಡಿಲಿಸಿ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಮತ್ತು ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಣೆ ಮಾಡಬೇಕು”
ಸತ್ಯನಾರಾಯಣ ಜಿ. ಟಿ ಕರೂರು
ಮಾಜಿ ಗ್ರಾ ಪಂ ಅಧ್ಯಕ್ಷರು ತುಮರಿ.