ಕುಂದಾಪುರ; ಜ.29 : ಕೋಟೇಶ್ವರದ ಮಹತೊಬಾರ ಶ್ರೀ ಕೋಟಿಲಿಂಗೇಶ್ವರ ದೇವಳದಲ್ಲಿ ನೂತನ ಧ್ವಜ ಸ್ಥ0ಭ ಪ್ರತಿಷ್ಠಾ ವಿಧಿಗೆ ಚಾಲನೆ ನೀಡಲಾಗಿದೆ. ಜ.29ರ ಶನಿವಾರ ಮುಂಜಾನೆ ತಂತ್ರಿ ಪ್ರಸನ್ನ ಕುಮಾರ ಐತಾಳರ ನೇತೃತ್ವದ ಅರ್ಚಕ ತಂಡದವರು ನಿಧಿಕುಂಭ ಸ್ಥಾಪನೆಯ ಪೂಜೆ ಇತ್ಯಾದಿ ಪೂರ್ವ ಕಾರ್ಯಗಳನ್ನು ನೆರವೇರಿಸಿದರು.



ನೂತನ ಧ್ವಜ ಸ್ಥ0ಭ ಪ್ರತಿಷ್ಠಾಪಿಸುವಾಗ ಅದರ ಬುಡದಲ್ಲಿ ನಿಧಿ ಹುದುಗಿಸಬೇಕಾಗುತ್ತದೆ. ಅದಕ್ಕಾಗಿ ಚಿನ್ನ, ಬೆಳ್ಳಿ ಸೇರಿದಂತೆ ನವರತ್ನಗಳು ತುಂಬಿದ ಕುಂಭವೊಂದನ್ನು ಭೂಗತಗೊಳಿಸಲಾಗುತ್ತದೆ.


ಕನಿಷ್ಠ 67 ವರ್ಷಗಳಿಗೊಮ್ಮೆ ಬರುವ ಈ ಅಪರೂಪದ ಧಾರ್ಮಿಕ ವಿಧಿಯು ನಡುಹರೆಯದವರಿಗೆಲ್ಲ ಜೀವಮಾನದಲ್ಲೊಮ್ಮೆಯ ವಿದ್ಯಮಾನ. ಆದ್ದರಿಂದ ಸಾರ್ವಜನಿಕ ಭಕ್ತಾಭಿಮಾನಿಗಳಿಗೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಮುಕ್ತ ಅವಕಾಶವನ್ನು ದೇವಾಲಯ ಆಡಳಿತ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳವರು ಕಲ್ಪಿಸಿದ್ದಾರೆ. ದೇವಳ ಸೇವಾ ಕೌಂಟರಿನಲ್ಲಿ ಸಿಗುವ ವಿವಿಧ ಬಗೆಯ ಬೆಳ್ಳಿ ನಾಣ್ಯಗಳನ್ನು ಆಸಕ್ತರು ಯಥಾನುಶಕ್ತಿ ಖರೀದಿಸಿ, ನಿಧಿಕುಂಭಕ್ಕೆ ಸಮರ್ಪಿಸಬಹುದು. ಜ.31ರ ಸೋಮವಾರ ಸಂಜೆಯವರೆಗೂ ಇದಕ್ಕೆ ಅವಕಾಶವಿದೆ ಎಂದು ಸಮಿತಿಗಳವರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಪೂಜೆಯ ನಂತರ ಶ್ರೀ ಕೋಟಿಲಿಂಗೇಶ್ವರ ದೇವರ ಮುಂಭಾಗದ ತೀರ್ಥ ಮಂಟಪದ ಬಳಿ ಈ ನಿಧಿಕುಂಭವನ್ನು ಇರಿಸಲಾಗಿದ್ದು, ಭಕ್ತರು ನಾಣ್ಯಗಳನ್ನು ತುಂಬಿಸಬಹುದಾಗಿದೆ.

ಮುಂಜಾನೆ ನಿಧಿಕುಂಭ ಪೂಜಾ ಸಂದರ್ಭದಲ್ಲಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ಕಾರ್ಯದರ್ಶಿ ಪ್ರಭಾಕರ ಕುಂಭಾಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್, ಧಾರ್ಮಿಕ ಸಮಿತಿಯ ಎಚ್.
ರಾಮಚಂದ್ರ ವರ್ಣ, ಶಿಲ್ಪಿ ರಾಜಗೋಪಾಲ ಆಚಾರ್ಯ, ವಿವಿಧ ಸಮಿತಿಗಳವರು, ಗ್ರಾಮಸ್ಥರು ಉಪಸ್ಥಿತರಿದ್ದರು.



ಕ್ಷೇತ್ರದಲ್ಲಿ ಕೋವಿಡ್ ನಿಯಮಗಳನ್ನನುಸರಿಸಿ, ಫೆ.7ರಿಂದ 17ರವರೆಗೆ ಧ್ವಜ ಸ್ಥ0ಭ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಬ್ರಹ್ಮರಥೋತ್ಸವ ಸಮಾರಂಭಗಳನ್ನು ಆಯೋಜಿಸಲಾಗಿದೆ. ಫೆ.10ರ ಗುರುವಾರ ನೂತನ ಧ್ವಜಸ್ತ0ಭ ಪ್ರತಿಷ್ಠಾಪನೆ, 15ರ ಮಂಗಳವಾರ ಬ್ರಹ್ಮಕಲಶಾಭಿಷೇಕ ಹಾಗೂ 16 ರ ಬುಧವಾರ ಶ್ರೀಮನ್ಮಹಾರಥೋತ್ಸವಗಳು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ. ಭಕ್ತ ಜನರು ದೇಣಿಗೆ ಮತ್ತು ಹೊರೆಕಾಣಿಕೆ ಸಲ್ಲಿಸಲು ಅವಕಾಶವಿದೆ. ಮಾಹಿತಿಗಾಗಿ ಸೇವಾ ಕೌಂಟರ್ ಅಥವಾ 9611197096, 9448188166 ಅಥವಾ 9448381756 ನ್ನು ಸಂಪರ್ಕಿಸಬಹುದಾಗಿದೆ.