ಡೈಲಿ ವಾರ್ತೆ:25 ಜನವರಿ 2023

ದಕ್ಷಿಣ ಕನ್ನಡ : ನೇತ್ರಾವತಿ ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನ, ಸ್ಥಳೀಯರಿಂದ ರಕ್ಷಣೆ

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಧರ್ಮಸ್ಥಳದ ನೇತ್ರಾವತಿ ಸೇತುವೆಯ ಮೇಲಿನಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಈ ವೇಳೆ ಸ್ಥಳೀಯರು ನೀರಿಗೆ ಹಾರಿ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಮೈಸೂರು ಜಿಲ್ಲೆಯ ಲಕ್ವಾಲ್ಲಿ ಮೂಲದ ಮಂಜು (52) ಎಂದು ಗುರುತಿಸಲಾಗಿದೆ.

ಮಂಜು ಅವರ ಪತ್ನಿ ಮತ್ತು ಮಕ್ಕಳು ಹತ್ತು ದಿನಗಳ ಹಿಂದೆ ಮನೆಯಲ್ಲಿ ಗಲಾಟೆ ಮಾಡಿ ಮನೆ ಬಿಟ್ಟು ಹೋಗಿದ್ದು ಇದರಿಂದ ಮಾನಸಿಕವಾಗಿ ನೊಂದಿದ್ದರು. ಧರ್ಮಸ್ಥಳದ ಕನ್ಯಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಜ. 24 ರಂದು ಸಂಜೆ ನೇತ್ರಾವತಿ ಸೇತುವೆ ಹತ್ತಿರ ಬಂದು ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ನೀರಿಗೆ ಹಾರಿದ ವೃದ್ಧ ಮಂಜು ಕೈ, ಕಾಲಿಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಸ್ಥಳೀಯರು ಸೇರಿ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸರು ಘಟನ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.