ಡೈಲಿ ವಾರ್ತೆ:16 ಫೆಬ್ರವರಿ 2023
ಬಂಟ್ವಾಳ: ಸೆಂಟ್ರಿಂಗ್ ಶೀಟ್ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ, ಪೆ.16 : ಸೆಂಟ್ರಿಂಗ್ ಶೀಟ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿಗಳನ್ನು ಕಳವುಗೈದ ಸೊತ್ತುಗಳ ಸಹಿತ ಬಂಧಿಸುವಲ್ಲಿ ಸಫಲರಾಗಿದ್ದಾರೆ.ಬಂಧಿತರನ್ನು ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಟಿ ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಅನ್ಸಾಫ್ (34) ಹಾಗೂ ತುಂಬೆ ಗ್ರಾಮದ ಮದಕ ನಿವಾಸಿ ಹಕೀಂ ಎಂಬವರ ಪುತ್ರ ನವಾಜ್ (24) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕಳವು ಮಾಡಿದ 97,900/- ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಆರೋಪಿಗಳು ಫೆ 12 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ 21 ಗೋಣಿ ಚೀಲಗಳಲ್ಲಿ 90,000/- ರೂಪಾಯಿ ಮೌಲ್ಯದ 401 ಕೆ ಜಿ ಅಡಿಕೆಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.ಫೆ 7 ರಂದು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಎಂಬಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಫಾರೂಕ್ ಎಂಬವರ ಬಾಬ್ತು 97,900/- ರೂಪಾಯಿ ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಠಾಣೆಯಲ್ಲಿ ದಾಖಲಾದ ದೂರಿನಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ಬೇಧಿಸುವಲ್ಲಿ ಸಫಲರಾಗಿದ್ದಾರೆ. ಜಿಲ್ಲಾ ಎಸ್ಪಿ ಡಾ. ವಿಕ್ರಂ ಅಮಾಟೆ, ಮಾರ್ಗದರ್ಶನದಲ್ಲಿ ಬಂಟ್ವಾಳ ಎ ಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಹಾಗೂ ಬಂಟ್ವಾಳ ನಗರ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಎಸ್ಐ ಗಳಾದ ನಾರಾಯಣ, ಜಿನ್ನಪ್ಪ ಗೌಡ,
ಎಚ್. ಸಿ. ಗಳಾದ ಇರ್ಷಾದ್ ಪಿ , ರಾಜೇಶ್, ಗಣೇಶ್, ಮನೋಹರ, ಪಿಸಿ ಗಳಾದ ಪ್ರವೀಣ್, ಮೋಹನ ಅವರು ಭಾಗವಹಿಸಿರುತ್ತಾರೆ.