ಡೈಲಿ ವಾರ್ತೆ: 11/ಮೇ /2024

ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ: ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

ಅಹಮದಾಬಾದ್‌: ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಅತ್ಯುತ್ಸಾಹ ಭದ್ರತಾ ವೈಫಲ್ಯಗಳಿಗೆ ದಾರಿ ಮಾಡಿಕೊಡುತ್ತಿದೆ. ಅದೇ ರೀತಿ ಶುಕ್ರವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಧೋನಿ ಅಭಿಮಾನಿಯೊಬ್ಬರು  ದಿಢೀರ್‌ ಮೈದಾನಕ್ಕೆ ನುಗ್ಗಿದ್ದು, ಭದ್ರತಾ ವೈಫಲ್ಯಕ್ಕೆ ಕಾರಣವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್  ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ.
42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದ ಪರವಾಗಿಯೇ ಆಡಿದ್ದಾರೆ. ಈಗಲೂ ಆರೋಗ್ಯ ಸಮಸ್ಯೆಯಿದ್ದರೂ ಮಹಿ ತಮ್ಮ ಅಭಿಮಾನಿಗಳಿಗಾಗಿಯೇ ಆಡುತ್ತಿದ್ದಾರೆ.

ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್‌ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿದ್ದಾರೆ. ಎಂ.ಎಸ್ ಧೋನಿ ಅವರ ಪಾದಗಳನ್ನು ಮುಟ್ಟಿ, ತಮ್ಮ ತಲೆಯನ್ನು ನೆಲಕ್ಕೆ ಸ್ಪರ್ಶಿಸಿ ನಮಸ್ಕರಿಸಿದ್ದಾರೆ. ದಿಢೀರನೆ ಬಂದ ಅಭಿಮಾನಿ ಕಂಡು ಕ್ಷಣಿಕ ಬೆಚ್ಚಿದ ಮಹಿ ಬಳಿಕ ಅಭಿಮಾನಿಯನ್ನು ನಿಲ್ಲಿಸಿ, ಹೆಗಲ ಮೇಲೆ ಕೈಯಿಟ್ಟು ಮಾತನಾಡಿಸಿದ್ದಾರೆ, ಪ್ರೀತಿಯ ಅಪ್ಪುಗೆಯೊಂದಿಗೆ ಬೀಳ್ಕೊಟ್ಟಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಅಭಿಮಾನಿಯನ್ನು ಎಳೆದೊಯ್ಯುವ ವೇಳೆ, ಅವರನ್ನು ಆರಾಮಾಗಿ ಹೋಗಲು ಬಿಡಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ಮಹಿ ಅವರ ಈ ನಡೆ ಅಭಿಮಾನಿಗಳ ಹೃದಯಸ್ಪರ್ಶಿಸುವಂತೆ ಮಾಡಿದೆ. ಈ ಕುರಿತ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.