ಡೈಲಿ ವಾರ್ತೆ: 02/ಫೆ /2025

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು

ಬೆಳಗಾವಿ: ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಗಂಗವ್ವ ಗೊಡಕುಂದ್ರಿ (31) ಮೃತ ದುರ್ದೈವಿ.

ಗಂಗವ್ವ ಗೊಡಕುಂದ್ರಿ ಅವರು ಜನವರಿ 28 ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 30ರ ರಾತ್ರಿ ಗಂಗವ್ವ ಗೊಡಕುಂದ್ರಿ ಅವರಿಗೆ ಹೆರಿಗೆ ಆಗಿತ್ತು. ಗಂಗವ್ವ ಗೊಡಕುಂದ್ರಿ ಅವರಿಗೆ ಬಿಪಿ ಲೋ ಆಗಿ ಸೀರಿಯಸ್ ಇದೆ ಎಂದು ವೈದ್ಯರು ಜ.31ರಂದು ಕುಟುಂಬಸ್ಥರಿಗೆ ತಿಳಿಸಿದ್ದರು.
ಇದಾದ ಸ್ಪಲ್ಪ ಹೊತ್ತಿಗೆ ಬಾಣಂತಿ ಗಂಗವ್ವ ಗೊಡಕುಂದ್ರಿ ಮೃತಪಟ್ಟಿದ್ದಾರೆ. ಬಳಿಕ ವೈದ್ಯರು ಗಂಗವ್ವ ಗೊಡಕುಂದ್ರಿ ಕುಟುಂಬಸ್ಥರ ಕಡೆಯಿಂದ ಖಾಲಿ ಪೇಪರ್ ಮೇಲೆ ಸಹಿ ಮಾಡಿಸಿಕೊಂಡು ಮೃತದೇಹವನ್ನು ಕೊಟ್ಟು ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಮ್ಸ್​ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಸಿರಿಯಸ್ ಇದ್ದಾಗ ವೈದ್ಯರು ಸರಿಯಾಗಿ ಚಿಕಿತ್ಸೆ ಕೊಟ್ಟಿದ್ದರೇ ಅಕ್ಕ ಉಳಿಯುತ್ತಿದ್ದಳು. ನನ್ನ ಅಕ್ಕನ ಸಾವಿಗೆ ವೈದ್ಯರು ಕಾರಣ ಎಂದು ಗಂಗವ್ವ ಸಹೋದರ ಶಂಕರಪ್ಪ ಆರೋಪಿಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೆಳಗಾವಿ ಜಿಲ್ಲೆಯಲ್ಲಿ 29 ಬಾಣಂತಿಯರ ಸಾವು:
ಕಳೆದ ವರ್ಷ ಬೆಳಗಾವಿ ಜಿಲ್ಲೆಯಲ್ಲಿ 29 ಬಾಣಂತಿಯರು ಮತ್ತು 322 ಶಿಶುಗಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದರು. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದಿರುವುದು, ರಕ್ತಸ್ರಾವ, ವೈದ್ಯರ ನಿರ್ಲಕ್ಷ್ಯ ಮುಂತಾದ ಕಾರಣಗಳಿಂದ ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ತಿಳಸಿದ್ದರು.

ಬಿಮ್ಸ್​ನಲ್ಲಿ ಐವರು ಬಾಣಂತಿಯರ ಸಾವು:
ಕಳೆದ ವರ್ಷ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ, ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. 2024ರ ನವೆಂಬರ್​ 9 ರಂದು ಜಿಲ್ಲಾ ಆಸ್ಪತ್ರೆಯಲ್ಲಿ 14 ಬಾಣಂತಿಯರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಈ ಪೈಕಿ ಒಂಬತ್ತು ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡುಬಂದಿತ್ತು. ತಕ್ಷಣ ಏನಾಯಿತು ಅಂತ ಗಮನಿಸುವಷ್ಟರಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟಿದ್ದರು. ನಂದಿನಿ ಹಾಗೂ ಲಲಿತಮ್ಮ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್​ನಲ್ಲಿ ಕೊನೆಯುಸಿರು ಎಳೆದಿದ್ದರು.

ಬಳಿಕ ಉಳಿದ ಏಳು ಬಾಣಂತಿಯರನ್ನು ಬಿಮ್ಸ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಏಳು ಬಾಣಂತಿಯರಲ್ಲಿ ಬಾಣಂತಿ ರೋಜಮ್ಮ ಬಿಮ್ಸ್​ನಲ್ಲಿ ನವೆಂಬರ್​ 13 ರಂದು ಮೃತಪಟ್ಟಿದ್ದರು. ಅಲ್ಲಿಂದ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ತನಿಖಾ ತಂಡವನ್ನ ಕಳುಹಿಸಿ ಬಾಣಂತಿಯರ ಸರಣಿ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಬಾಣಂತಿಯರ ಸಾವಿಗೆ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ತನಿಖಾ ತಂಡ ಮಾಹಿತಿ ನೀಡಿತ್ತು. ಇದಾದ ಬಳಿಕ ನವೆಂಬರ್​ 25 ರಂದು ಬಾಣಂತಿ ಮುಸ್ಕಾನ್, ಡಿಸೆಂಬರ್ 5 ರಂದು ಬಾಣಂತಿ ಸುಮಯಾ ಮೃತಪಟ್ಟಿದ್ದರು.