



ಡೈಲಿ ವಾರ್ತೆ: 23/ಅ./2025

ಸಾಲಿಗ್ರಾಮ| ಪಾರಂಪಳ್ಳಿಯಲ್ಲಿ ಘನ ತ್ಯಾಜ್ಯ ಘಟಕ ಉದ್ಘಾಟಿಸಿದರೆ ಕಪ್ಪು ಬಾವುಟ ಪ್ರದರ್ಶನ – ಕೋಟ ನಾಗೇಂದ್ರ ಪುತ್ರನ್

ಕೋಟ| ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ
ಪಾರಂಪಳ್ಳಿಯಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ಘನ ತ್ಯಾಜ್ಯ ಘಟಕ ಕಾನೂನಿಗೆ ವಿರುದ್ಧವಾಗಿದ್ದು ಇದರ ಉದ್ಘಾಟನೆಯಲ್ಲಿ ಯಾವುದೇ ಜನಪ್ರತಿನಿಧಿಗಳು ಭಾಗವಹಿಸಬಾರದೆಂದು ಹಾಗೂ ಉದ್ಘಾಟನೆಯನ್ನೇ ರದ್ದುಗೊಳಿಸಬೇಕೆಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಪಾರಂಪಳ್ಳಿ ಗ್ರಾಮದ ಸರ್ವೇ ನಂಬ್ರ 104/24, 25 ರಲ್ಲಿ, ಘನ ತ್ಯಾಜ್ಯ ಘಟಕ ಉದ್ಘಾಟನೆಗೆ ಮುಂದಾಗಿದ್ದು ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಬಾರಿ ಸುಮಾರು 5 ರಿಂದ 6 ತಿಂಗಳಿಂದ ಕಾಲ ನಿರಂತರವಾಗಿ ಸ್ಥಳೀಯ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು ಕೂಡ ಸಾರ್ವಜನಿಕರನ್ನು ಕಡೆಗಣಿಸಿ ಸುತ್ತ ಮುತ್ತಲಿನ ಕೃಷಿ ಭೂಮಿ, ಪರಿಸರಕ್ಕೆ ಮಾರಕವಾಗಿ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ಘನ ತ್ಯಾಜ್ಯ ಘಟಕ / ಕಸ ವಿಲೇವಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಹಾನಿಯಾಗಿದ್ದು, ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ ಎಂದರು.
ಇದೇ ಜಾಗದಲ್ಲಿ ಈ ಹಿಂದೆ ಮೀನು ಸಂಸ್ಕರಣ ಘಟಕವನ್ನು ಪ್ರಾರಂಭಿಸಿದಾಗ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ನಿರ್ಮಾಣದ ಹಂತದಲ್ಲಿದ್ದ ಮೀನು ಸಂಸ್ಕರಣ ಘಟಕವನ್ನು ಮುಚ್ಚಿಸಿದ್ದರು. ಕಾನೂನಿನ ಪ್ರಕಾರ “CRZ” ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ, ಹಾಗೆ ಎಸ್, ಡಬ್ಲ್ಯೂ, ಎಂ ಅಡಿಯಲ್ಲಿ ಕೃಷಿಭೂಮಿಯ ಬಳಿ ತ್ಯಾಜ್ಯ ನಿರ್ವಹಣೆ ಘಟಕ ಮಾಡುವಂತಿಲ್ಲ. ಇಷ್ಟೆಲಾ ಗೊಂದಲಗಳ ನಡುವೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಸಮೇತ ಈ ಜಾಗ ಖರೀದಿಸಿದ್ದು ಹೇಗೆ.
ಇಲ್ಲಿ ಸಂಪೂರ್ಣವಾಗಿ ಅಧಿಕಾರ ದುರುಪಯೋಗ ಹಾಗೂ ದೊಡ್ಡ ಮಟ್ಟದಲ್ಲಿ ರಾಜಕೀಯ ನಾಯಕರ ಸಮೇತ ಭ್ರಷ್ಟಾಚಾರ ನಡೆದಿರುವುದು ಗೋಚರಿಸುತ್ತಾ ಇದೆ ಎಂದು ಹೇಳಿದರು.
ಹಲವಾರು ವರ್ಷಗಳ ಹಿಂದೆ ಹಚ್ಚ ಹಸಿರಾಗಿರುವ ಈ ಪ್ರದೇಶ ಈಗ ರೋಗ ರುಜಿನಗಳ ಊರಾಗುವ ಸಾಧ್ಯತೆ ಇದೆ,ಆದ್ದರಿಂದ ಈಗಾಗಲೇ ಉದ್ಘಾಟನೆಗೆ ಸಮಯ ನಿಗದಿ ಆಗಿದ್ದು, ಉದ್ಘಾಟನೆಗೆ ಬರುವ ಮುಖ್ಯ ಅತಿಥಿಗಳು ಸಾಲಿಗ್ರಾಮ ಪಟ್ಟಣ ಪಂಚಾಯತ್ ನಡೆಸಿಕೊಡುವ ಉದ್ಘಾಟನಾ ಸಮಾರಂಭ ಕಾನೂನಾತ್ಮಕವಾಗಿ ಇದೆಯಾ ಎಂದು ಪರಿಶೀಲಿಸಿ ಉದ್ಘಾಟನೆಗೆ ಬರಬೇಕು ಎಂದು ವಿನಂತಿ, ಏನೂ ಪರಿಶೀಲಸದೆ ಉದ್ಘಾಟನೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಆಗಬಾರದು ಎಂದು ಒತ್ತಾಯ ಮಾಡುತ್ತೇನೆ ಎಂದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಆಯೋಜನೆ ಮಾಡಿರುವ SWM ಉದ್ಘಾಟನೆಯು ರಾಜಕೀಯ ಪ್ರೇರಿತವಾಗಿದ್ದು, ಯಾವುದೇ ಪಕ್ಷದ ನಾಯಕರು ಹಾಗೂ ಸರಕಾರ ಸಾರ್ವಜನಿಕರಿಗೆ ಬೆಂಬಲವಾಗಿ, ಸ್ಥಳೀಯರ ವಿರೋಧವಿದ್ದರೆ ಈ ಉದ್ಘಾಟನೆಯಲ್ಲಿ ಭಾಗವಹಿಸಬಾರದು ಎಂದು ಪತ್ರಿಕ ಹೇಳಿಕೆ ಮುಖಾಂತರ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ನಮ್ಮ ಮಾತು ಮೀರಿ ಉದ್ಘಾಟನೆ ಮಾಡಿದ್ದೇಯಲ್ಲಿ
ಕಪ್ಪು ಬಾವುಟ ಪ್ರದರ್ಶಿಸಿ ಶಾಂತಿಯುತ ಪ್ರತಿಭಟನೆ ಮಾಡುವುದಾಗಿ ಕೋಟ ನಾಗೇಂದ್ರ ಪುತ್ರನ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ನಾಗೇಂದ್ರ ಪುತ್ರನ್, ಮಹೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ನಾಗರಾಜ್, ಗಣೇಶ್ ಉಪಸ್ಥಿತರಿದ್ದರು.