ಡೈಲಿ ವಾರ್ತೆ: 02/JUNE/2025

ಉಳ್ಳಾಲ| ಕೇರಳದಿಂದ ಅಕ್ರಮ ಗೋ ಸಾಗಾಟ – ಸಿಸಿಬಿ ಪೊಲೀಸರ ಕಾರ್ಯಾಚರಣೆ, ಓರ್ವ ವಶಕ್ಕೆ, 24 ಜಾನುವಾರುಗಳ ರಕ್ಷಣೆ!

ಉಳ್ಳಾಲ: ಕೇರಳದಿಂದ ಕದ್ದು ಕೂಡಿ ಹಾಕಿದ್ದ ಸುಮಾರು 24ಕ್ಕೂ ಹೆಚ್ಚು ಜಾನುವಾರುಗಳನ್ನ ಕಂಟೇನ‌ರ್ ಲಾರಿಯಲ್ಲಿ ಕೇರಳದಿಂದ ಮಂಗಳೂರಿಗೆ ಸಾಗಿಸುತ್ತಿದ್ದ ವೇಳೆ ತಲಪಾಡಿ ಟೋಲ್ ಗೇಟ್ ಬಳಿ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನ ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ, ತಲಪಾಡಿ ಟೋಲ್ ಗೇಟ್ ಬಳಿ ಜಾನುವಾರು ಸಾಗಾಟದ ಲಾರಿ ಬರುವುದನ್ನೇ ಕಾದು ಕುಳಿತಿತ್ತು. ಈ ವೇಳೆ ರಾತ್ರಿ ಸುಮಾರು 1 ಗಂಟೆ ವೇಳೆ ಕೇರಳದಿಂದ ಬಂದ ಕಂಟೇನರ್ ಲಾರಿಯನ್ನ ತಡೆದು ತಪಾಸಣೆ ನಡೆಸಿದಾಗ ಸುಮಾರು 24 ಜಾನುವಾರುಗಳನ್ನ ಅಮಾನುಷ, ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪೋಲೀಸರು ಕಂಟೇನರ್ ಚಾಲಕ ಉತ್ತರ ಪ್ರದೇಶ, ಮುಜಾಫ‌ರ್ ನಗರ ಜಿಲ್ಲೆಯ ಸಹಾನ್ ಪೂರ್ ನಿವಾಸಿ ಆಸಿಫ್(25) ಎಂಬಾತನನ್ನ ಬಂಧಿಸಿದ್ದು ಆತನ ಜೊತೆಯಲಿದ್ದ ಮತ್ತೊರ್ವ ಪರಾರಿಯಾಗಿದ್ದಾನೆ.

ಜಾನುವಾರುಗಳನ್ನ ಕೇರಳದಿಂದ ಕದ್ದು ಸಾಗಿಸುತ್ತಿರುವ ಬಗ್ಗೆ ಬಂಧಿತ ಲಾರಿ ಡ್ರೈವರ್ ಆಸಿಫ್ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಜಾನುವಾರುಗಳನ್ನ ಎಲ್ಲೋ ಕೂಡಿಟ್ಟು ಬಳಿಕ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ನಡೆಸಿದ ಆರೋಪಿ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.