ಡೈಲಿ ವಾರ್ತೆ: 04/JUNE/2025

IPL 2025: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಪಡೆದ 14 ವರ್ಷದ ವೈಭವ್ ಸೂರ್ಯವಂಶಿ

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಕ್ಕೆ ತೆರೆಬಿದ್ದಿದೆ. ಅಹಮದಾಬಾದ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಚಾಂಪಿಯನ್ ಪಟ್ಟದೊಂದಿಗೆ ಆರ್​ಸಿಬಿ ತಂಡ ಬಹುಮಾನ ಮೊತ್ತವಾಗಿ 20 ಕೋಟಿ ರೂ. ತನ್ನದಾಗಿಸಿಕೊಂಡಿದೆ.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರೆ, ಬೌಲಿಂಗ್​​ನಲ್ಲಿ 25 ವಿಕೆಟ್ ಪಡೆದ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಪರ್ಪಲ್​ ಕ್ಯಾಪ್ ಪಡೆದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಈ ಬಾರಿ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ವೈಭವ್ ಸೂರ್ಯವಂಶಿ ಒಂದು ಶತಕದೊಂದಿಗೆ ಒಟ್ಟು 252 ರನ್ ಕಲೆಹಾಕಿದ್ದಾರೆ. ಅದು ಕೂಡ 206.55 ರ ಸ್ಟ್ರೈಕ್​ ರೇಟ್​ನಲ್ಲಿ ಎಂಬುದು ವಿಶೇಷ. ಈ ಮೂಲಕ ಈ ವರ್ಷದ ಸೂಪರ್ ಸ್ಟ್ರೈಕರ್ ಎನಿಸಿಕೊಂಡಿದ್ದಾರೆ. ಅದರಂತೆ ಸೂಪರ್ ಸ್ಟ್ರೈಕರ್​ಗೆ ನೀಡಲಾಗುವ ಟಾಟಾ ಕರ್ವ್ ಕಾರು 14 ವರ್ಷದ ವೈಭವ್ ಸೂರ್ಯವಂಶಿ ಪಾಲಾಗಿದೆ.