ಡೈಲಿ ವಾರ್ತೆ: 11/JUNE/2025

ಶಿವಮೊಗ್ಗ| ಯುವತಿಯ ಮೊಬೈಲ್‌ ಕದ್ದು ಮರವೇರಿ ಕುಳಿತ ಮಂಗ.!

ಶಿವಮೊಗ್ಗ: ಮಂಗವೊಂದು ಯುವತಿಯ ಮೊಬೈಲ್‌ ಕದ್ದು ಮರವೇರಿ ಕುಳಿತು ಸುಮಾರು ಒಂದು ಗಂಟೆಯ ಪ್ರಹಸನದ ಬಳಿಕ ಮಂಗ ಮೊಬೈಲ್‌ ಬಿಟ್ಟು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ನಡೆದಿದೆ.

ಆಸ್ಪತ್ರೆಯ ಸಿಬ್ಬಂದಿ ರೇಷ್ಮಾ ಎಂಬುವವರ ಮೊಬೈಲ್ ನ್ನು ಮಂಗ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿತ್ತು.
ಮೊಬೈಲ್‌ ಕಸಿದುಕೊಂಡು ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿದ್ದ ಮಂಗ ಜನರಿಗೆ ಕುತೂಹಲ ಮೂಡಿಸಿತ್ತು. ಮರದ ತುದಿಗೆ ಏರಿ ರೆಂಬೆಯೊಂದರ ಮೇಲೆ ಬಹು ಹೊತ್ತು ಕುಳಿತುಕೊಂಡಿತ್ತು. ಆಗಾಗ ಮೊಬೈಲನ್ನು ಎದೆಗವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್‌ ಪರದೆ ಗಮನಿಸುತಿತ್ತು. ಇನ್ನು ಕೆಲವೊಮ್ಮೆ ಮೊಬೈಲ್‌ ಪರದೆ ಮೇಲೆ ಬೆರಳು ಆಡಿಸುತ್ತಾ, ಮೊಬೈಲ್‌ ಕಿವಿಗೆ ಹಿಡಿದು ಕುಳಿತಿತ್ತು.
ಮೊಬೈಲ್‌ ಹಿಡಿದು ಮರವೇರಿದ್ದ ಮಂಗನ ಹಾವಾಭಾವ ಗಮನಿಸಲು ದೊಡ್ಡ ಸಂಖ್ಯೆಯ ಜನರು ರಸ್ತೆ ಬದಿ ನಿಂತಿದ್ದರು. ಮಂಗನ ಕೈಯಿಂದ ಮೊಬೈಲ್‌ ಕಸಿದುಕೊಳ್ಳಲು ಏನೆಲ್ಲ ಮಾಡಬಹುದು ಎಂದು ಚರ್ಚಿಸುತ್ತಿದ್ದರು. ಕೆಲವರು ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯ ಸೆರೆ ಹಿಡಿಯುತ್ತಿದ್ದರು. ವಾಹನ ಸವಾರರು ಮಂಗನಾಟ ಗಮನಿಸಲು ವಾಹನ ನಿಲ್ಲಿಸುತ್ತಿದ್ದರಿಂದ ಸಂಚಾರ ದಟ್ಟಣೆಯು ಉಂಟಾಯಿತು.

ನಂಜಪ್ಪ ಆಸ್ಪತ್ರೆ ಸಿಬ್ಬಂದಿ ಕಟ್ಟಡದ ಮೇಲೇರಿಗೆ ಮಂಗಕ್ಕೆ ಬಾಳೆ ಹಣ್ಣು ತೋರಿಸಿ ಗಮನ ಸೆಳೆದರು. ಆಸೆಯಿಂದ ಕಟ್ಟಡದ ಮೇಲೆ ಬಂದು ಬಾಳೆ ಹಣ್ಣು ತೆಗೆದುಕೊಳ್ಳುತ್ತಿದ್ದಂತೆ ಪಟಾಕಿ ಸಿಡಿಸಿದರು. ಕೊನೆಗೆ ಬಾಳೆ ಹಣ್ಣು ಎತ್ತಿಕೊಂಡು, ಮೊಬೈಲ್‌ ಬಿಟ್ಟು ಮಂಗ ಪರಾರಿಯಾಯಿತು.