ಡೈಲಿ ವಾರ್ತೆ: 11/JUNE/2025

ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ : ಮಾಜಿ ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ಎಫ್‌ಐಆ‌ರ್ ದಾಖಲು

ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರು ತನ್ನ ಇಬ್ಬರು ಸಹಚರರೊಂದಿಗೆ ಸೇರಿ ಪಣಂಬೂರಿನಲ್ಲಿರುವ ನವ ಮಂಗಳೂರು ಬಂದರಿನ ಕಚೇರಿಗೆ ನುಗ್ಗಿ (ಎನ್‌ಎಂಪಿಎ) ಸರ್ಕಾರದ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪಣಂಬೂರು ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಕಾಮಗಾರಿಯೊಂದರ ಬಿಲ್ ಪಾಸ್ ಮಾಡುವ ವಿಚಾರದಲ್ಲಿ ಮೊಯ್ದಿನ್ ಬಾವಾ ಅವರು ಜೂನ್ 9ರಂದು ರಾತ್ರಿ ಎಂಟು ಗಂಟೆಗೆ ಎನ್‌ಎಂಪಿಎ ಕಚೇರಿಗೆ ಅಧಿಕಾರಿಗಳೊಂದಿಗೆ ಮಾತನಾಡಲು ಬಂದಿದ್ದು ಈ ವೇಳೆ ಡೆಪ್ಯುಟಿ ಚೇರ್ ಪರ್ಸನ್ ಕಚೇರಿಗೆ ನುಗ್ಗಿ ವಾಗ್ವಾದ ನಡೆಸಿದ್ದಾರೆ. ಅವರನ್ನು ಕಚೇರಿಯಿಂದ ಹೊರಗೆ ಹೋಗಲು ಬಿಡದೇ, 15 ನಿಮಿಷ ಕಾಲ ತಡೆದು ನಿಲ್ಲಿಸಿ ಕಿರುಚಾಡಿದ್ದಾರೆ. ನಂತರ ಅಧಿಕಾರಿ ಹೊರಗೆ ಬಂದಾಗಲೂ ಹಿಂಬಾಲಿಸುತ್ತ ಬೆದರಿಕೆ ಹಾಕಿದ್ದಾರೆ.

ಅಧಿಕಾರಿ ಬೇರೆ ಕರ್ತವ್ಯಕ್ಕಾಗಿ ಕಾರಿನಲ್ಲಿ ಹೊರಗಡೆ ತೆರಳಲು ಮುಂದಾಗಿದ್ದ ವೇಳೆಯೂ ಕಾರನ್ನು ತಡೆದು ನಿಲ್ಲಿಸಿ, ಬೈದಾಡಿದ್ದಾರೆ. ಈ ಘಟನೆ ಬಗ್ಗೆ ಎನ್‌ಎಂಪಿಎ ಸೆಕ್ರೆಟರಿಯವರು ಜೂನ್ 10ರಂದು ಸಂಜೆ ಪಣಂಬೂರು ಠಾಣೆಗೆ ದೂರು ನೀಡಿದ್ದು ಈ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.