ಡೈಲಿವಾರ್ತೆ:10/ಏಪ್ರಿಲ್ /2026

ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ; 2 ಸಾವಿರ ಅಡಿ ಪ್ರಪಾತಕ್ಕೆ ಬಿದ್ದ ಶ್ರೀನಂದಾ

​ಚಿಕ್ಕಮಗಳೂರು, ಏಪ್ರಿಲ್ 10: ಕಳೆದ ಮೂರು ದಿನಗಳಿಂದ ಕಾಫಿನಾಡಿನ ಪ್ರವಾಸಿ ತಾಣದಲ್ಲಿ ಆತಂಕ ಮೂಡಿಸಿದ್ದ ನಾಪತ್ತೆ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಅವರ ಮೃತದೇಹ ಇಂದು ಸುಮಾರು 2 ಸಾವಿರ ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.

​ಘಟನೆಯ ಹಿನ್ನೆಲೆ:
ಕೇರಳದಿಂದ ಏಪ್ರಿಲ್ 7ರಂದು ಚಿಕ್ಕಮಗಳೂರಿಗೆ ಆಗಮಿಸಿದ್ದ 40 ಪ್ರವಾಸಿಗರ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮು ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಾ ದರ್ಶನದ ವೇಳೆ ಬಾಲಕಿ ತಂಡದಿಂದ ಹಠಾತ್ತಾಗಿ ನಾಪತ್ತೆಯಾಗಿದ್ದರು. ಬಾಲಕಿಯ ಪತ್ತೆಗಾಗಿ ಕುಟುಂಬಸ್ಥರು ಮತ್ತು ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಪ್ರಕರಣದ ಗಂಭೀರತೆ ಅರಿತ ಜಿಲ್ಲಾಡಳಿತ, ಬಾಲಕಿಯ ಪತ್ತೆಗಾಗಿ ಬೃಹತ್ ಕಾರ್ಯಾಚರಣೆ ಕೈಗೊಂಡಿತ್ತು. ಎಸ್‌ಡಿಆರ್‌ಎಫ್ (SDRF), ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಎಎನ್ಎಫ್ (ANF) ತಂಡಗಳು ಜಂಟಿಯಾಗಿ ದಟ್ಟ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಲ್ಲಿ ಶೋಧ ನಡೆಸಿದ್ದವು. ದಟ್ಟ ಮಂಜು ಮತ್ತು ದುರ್ಗಮ ಹಾದಿಯ ನಡುವೆಯೂ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಿ ಬಾಲಕಿಗಾಗಿ ಹುಡುಕಾಟ ನಡೆಸಲಾಗಿತ್ತು.

ಸತತ ಮೂರು ದಿನಗಳ ಕಾಲ ನಡೆಸಿದ ತೀವ್ರ ಕಾರ್ಯಾಚರಣೆಯ ನಂತರ, ಇಂದು ಮಾಣಿಕ್ಯಧಾರಾದ ಅತ್ಯಂತ ಆಳವಾದ ಪ್ರಪಾತದ ತಳಭಾಗದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಘಟನೆಯ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

​ಕುಟುಂಬಸ್ಥರ ಆಕ್ರಂದನ:
ಮೃತದೇಹ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕೇರಳದಿಂದ ಬಂದಿದ್ದ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ