



ಡೈಲಿವಾರ್ತೆ:21ಏಪ್ರಿಲ್ /2026

ಮಲ್ಪೆಯಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಸಿನಿಮೀಯ ರೀತಿಯಲ್ಲಿ ಪರಾರೀ – ನಕಲಿ ನಂಬರ್ ಪ್ಲೇಟ್ ಹೊಂದಿದ್ದ 3 ಕಾರುಗಳ ವಶಪಡಿಕೆ

ಮಲ್ಪೆ, ಏ.21: ಎನ್‌ಡಿಪಿಎಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ತೆರಳಿದ ಮಲ್ಪೆ ಪೊಲೀಸರಿಗೆ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡ ಘಟನೆ ಉಡುಪಿ ತಾಲೂಕಿನ ಕೆಮ್ಮಣ್ಣು ಪ್ರದೇಶದಲ್ಲಿ ನಡೆದಿದೆ.
ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಗಂಗಪ್ಪ ಅವರ ನೇತೃತ್ವದಲ್ಲಿ, ಅಪರಾಧ ಕ್ರಮಾಂಕ 38/2026ರ ಎನ್‌ಡಿಪಿಎಸ್ ಕಾಯ್ದೆಯ ಪ್ರಕರಣದ ಪ್ರಮುಖ ಆರೋಪಿ ಸದಾಫ್ ಜಿ ಮೊಹಮ್ಮದ್ ತನ್ನ ಮನೆಯಲ್ಲಿ ಇರುವುದಾಗಿ ಖಚಿತ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ, ಪೊಲೀಸರು ಬೆಳಿಗ್ಗೆ 9:30ರ ಸುಮಾರಿಗೆ ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಸೇತುವೆ ಸಮೀಪದ ಮನೆಗೆ ದಾಳಿ ನಡೆಸಿದರು.
ಈ ವೇಳೆ, ಮನೆಯ ಟೆರೆಸ್‌ನಿಂದ ಪಕ್ಕದ ಶೆಡ್‌ನ ಮೇಲ್ಚಾವಣಿಗೆ ಹಾರಿದ ಆರೋಪಿ, ಪೊಲೀಸರ ಕೈ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯಂತೆ, ಆರೋಪಿ ಹಿಂದಿನ ರಾತ್ರಿ ಬಿಳಿ ಬಣ್ಣದ ಸ್ವೀಫ್ಟ್ ಕಾರಿನಲ್ಲಿ ಮನೆಗೆ ಬಂದಿದ್ದಾನೆ ಎಂಬುದು ತಿಳಿದುಬಂದಿದೆ.
ಪರಿಶೀಲನೆ ಮುಂದುವರಿಸಿದ ಪೊಲೀಸರು, ಆರೋಪಿತನ ಮನೆಯ ಸಮೀಪದ ತೆಂಗಿನ ತೋಟದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ ಎರಡು ಕಾರುಗಳನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ಹುಂಡೈ i20 ಕಾರಿಗೆ ಮಾರುತಿ ಸುಜುಕಿ ಬಲೆನೊ ಕಾರಿನ ನಕಲಿ ನಂಬರ್ ಪ್ಲೇಟ್ (KA20MC7034) ಅಳವಡಿಸಿರುವುದು ಬೆಳಕಿಗೆ ಬಂದಿದೆ. ಜೊತೆಗೆ, KA05MC7576 ಸಂಖ್ಯೆಯ ನೀಲಿ ಬಣ್ಣದ ಹೊಂಡಾ ಸಿಟಿ ಕಾರು ಮೇಲೂ ಅನುಮಾನ ವ್ಯಕ್ತವಾಗಿದೆ.
ಆರೋಪಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ, ಈ ವಾಹನಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.ಪಂಚರ ಸಮಕ್ಷಮ ಮಹಜರು ನಡೆಸಿದ ಪೊಲೀಸರು,ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಹುಂಡೈ i20 ಕಾರು (ಅಂದಾಜು ಮೌಲ್ಯ ₹3 ಲಕ್ಷ),ಹೊಂಡಾ ಸಿಟಿ ಕಾರು (₹1 ಲಕ್ಷ),ಮಾರುತಿ ಸುಜುಕಿ ಸ್ವೀಫ್ಟ್ ಕಾರು (₹3 ಲಕ್ಷ)ಇವುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46/2026ರಡಿ ಭಾರತೀಯ ನ್ಯಾಯ ಸಂಹಿತೆಯ ಕಲಂ 336(2), 336(3), 318(4) ಹಾಗೂ ಐಎಂವಿ ಕಾಯ್ದೆಯ 39 ಮತ್ತು 192ರಡಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.