ಡೈಲಿವಾರ್ತೆ: 10/ಮೇ/2026

ತಮಿಳುನಾಡು ರಾಜಕೀಯದಲ್ಲಿ ಹೊಸ ಪರ್ವ: ಮುಖ್ಯಮಂತ್ರಿಯಾಗಿ ನಟ ವಿಜಯ್ ಪ್ರಮಾಣವಚನ ಸ್ವೀಕಾರ

ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ಇಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಸದ್ಯ ವಿಜಯ್‌ ಅವರು ತಮ್ಮ ಸಂಪುಟದಲ್ಲಿ 9 ಮಂದಿ ಶಾಸಕರಿಗೆ ಮಂತ್ರಿಗಿರಿ ನೀಡಿದ್ದಾರೆ. ಟಿವಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ವಿಸಿಕೆ (VCK), ಸಿಪಿಐ, ಸಿಪಿಎಂ ಮತ್ತು ಮುಸ್ಲಿಂ ಲೀಗ್ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದರಿಂದ ಈ ಪಕ್ಷಗಳ ಶಾಸಕರು ಸಂಪುಟ ಸೇರುತ್ತಿಲ್ಲ.ಈ ಹಿಂದೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ವಿಸಿಕೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗಿತ್ತು. ಆದರೆ ವಿಜಯ್ ಸರ್ಕಾರದಲ್ಲಿ ಸದ್ಯಕ್ಕೆ ಯಾರಿಗೂ ಡಿಸಿಎಂ ಸ್ಥಾನ ನೀಡಿಲ್ಲ.

ಒಟ್ಟು ಸಂಖ್ಯಾಬಲ ಎಷ್ಟಿದೆ?ಟಿವಿಕೆ (107), ಕಾಂಗ್ರೆಸ್ (5), ಸಿಪಿಐ (2), ಸಿಪಿಎಂ (2), ವಿಸಿಕೆ (2), ಮುಸ್ಲಿಂ ಲೀಗ್ (2).ಸರ್ಕಾರ ರಚನೆಯ ಬೆನ್ನಲ್ಲೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಮೇ 13ರವರೆಗೆ (3 ದಿನಗಳು) ಗಡುವು ನೀಡಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ವಿಜಯ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿದ್ದಾರೆ.