


ಡೈಲಿವಾರ್ತೆ: 20/ನ./2026




ಮಂಗಳೂರು: ಮೆಡಿಕಲ್ ಕಾಲೇಜಿನಿಂದಲೇ ವಿದ್ಯಾರ್ಥಿನಿ ಅಪಹರಣ – ಪ್ರೇಮ ವಿಚಾರಕ್ಕೆ ಸಂಬಂಧಿಕರ ಕೃತ್ಯದ ಶಂಕೆ, ತನಿಖೆಗೆ ಕಮಿಷನರ್ ಸೂಚನೆ!

ಮಂಗಳೂರು: ನಗರದ ಕಣಚೂರು ಮೆಡಿಕಲ್ ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿಯೊಬ್ಬಳನ್ನು ಹಲವು ಮಂದಿ ಬಲವಂತವಾಗಿ ಎಳೆದೊಯ್ದು ಥಾರ್ ಜೀಪ್ನಲ್ಲಿ ಕರೆದೊಯ್ದಿರುವ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಾಡಹಗಲೇ ನಡೆದ ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿವೆ.
ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೆಡಿಕಲ್ ವಿದ್ಯಾರ್ಥಿನಿಯಾಗಿದ್ದು, ಹಿಂದೂ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಕಾಲೇಜು ಆವರಣಕ್ಕೆ ಬಂದು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲವು ಮಂದಿ ಸೇರಿಕೊಂಡು ವಿದ್ಯಾರ್ಥಿನಿಯನ್ನು ಎಳೆದಾಡಿ ವಾಹನಕ್ಕೆ ಹತ್ತಿಸಿಕೊಂಡು ತೆರಳುತ್ತಿರುವ ದೃಶ್ಯಗಳು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬಂದಿವೆ.
ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಯುವತಿಯನ್ನು ಆಕೆಯ ಕುಟುಂಬಸ್ಥರೇ ಬಲವಂತವಾಗಿ ಕರೆದೊಯ್ದಿರುವ ಆರೋಪವಿದೆ. ಇಂತಹ ಕೃತ್ಯ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯುವತಿ ವಯಸ್ಕಳಾಗಿರುವುದರಿಂದ ತನ್ನ ಇಚ್ಛೆಯಂತೆ ಎಲ್ಲಿ ವಾಸಿಸಬೇಕು, ಯಾರೊಂದಿಗೆ ಇರಬೇಕು ಎಂಬುದನ್ನು ನಿರ್ಧರಿಸುವ ಸಂಪೂರ್ಣ ಕಾನೂನುಬದ್ಧ ಹಕ್ಕು ಆಕೆಗಿದೆ. ಆಕೆಯ ವೈಯಕ್ತಿಕ ನಿರ್ಧಾರಕ್ಕೆ ಕಾನೂನಿನ ರಕ್ಷಣೆ ಇದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣವೇ ಕಾಲೇಜು ಆಡಳಿತ ಮಂಡಳಿ ಅಥವಾ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಯುವತಿಯನ್ನು ಕರೆದೊಯ್ದ ವಾಹನ ನಗರದಿಂದ ಹೊರಹೋಗುವ ಮೊದಲೇ ತಡೆದು ಆಕೆಯನ್ನು ರಕ್ಷಿಸಲು ಸಾಧ್ಯವಾಗುತ್ತಿತ್ತು ಎಂಬ ಅಭಿಪ್ರಾಯವನ್ನೂ ಆಯುಕ್ತರು ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಯುವತಿಯ ಪತ್ತೆಗಾಗಿ ತೀವ್ರ ತನಿಖೆ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯುವತಿಯನ್ನು ಆದಷ್ಟು ಶೀಘ್ರ ಪತ್ತೆಹಚ್ಚಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

