



ಡೈಲಿವಾರ್ತೆ: 19/ಮೇ/2026

ಅಪ್ರಾಪ್ತ ಬಾಲಕರಿಂದ ದ್ವಿಚಕ್ರ ವಾಹನ ಚಾಲನೆ ಪತ್ತೆ: ಬಂಟ್ವಾಳದಲ್ಲಿ ಇಬ್ಬರು ವಾಹನ ಮಾಲೀಕರಿಗೆ ತಲಾ ₹25 ಸಾವಿರ ದಂಡ

ಬಂಟ್ವಾಳ: ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಲಾಯಿಸಲು ಅವಕಾಶ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಾಹನಗಳ ಮಾಲೀಕರಿಗೆ ತಲಾ ₹25 ಸಾವಿರ ದಂಡ ವಿಧಿಸಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಈ ಮೂಲಕ ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರು ಹಾಗೂ ವಾಹನ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನ್ಯಾಯಾಲಯ ರವಾನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ, ಎಪ್ರಿಲ್ 6ರಂದು ಬಂಟ್ವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರು ಪ್ರದೇಶದಲ್ಲಿ ಕೆಎ-19 ಎಚ್‌ಟಿ 9694 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಅಪ್ರಾಪ್ತ ಬಾಲಕ ಚಲಾಯಿಸುತ್ತಿರುವುದು ವಾಹನ ತಪಾಸಣೆ ವೇಳೆ ಪತ್ತೆಯಾಗಿತ್ತು. ಅದೇ ರೀತಿ ಎಪ್ರಿಲ್ 28ರಂದು ಬಿ.ಸಿ.ರೋಡು ಸಮೀಪ ಕೆಎ-05 ಕೆಜಿ 6785 ನೋಂದಣಿ ಸಂಖ್ಯೆಯ ಮತ್ತೊಂದು ದ್ವಿಚಕ್ರ ವಾಹನವನ್ನು ಸಹ ಅಪ್ರಾಪ್ತ ಬಾಲಕ ಚಾಲನೆ ಮಾಡುತ್ತಿರುವುದು ಸಂಚಾರ ಪೊಲೀಸರ ಗಮನಕ್ಕೆ ಬಂದಿತ್ತು.
ಎರಡೂ ಪ್ರಕರಣಗಳಲ್ಲೂ ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಿದ ಹಿನ್ನೆಲೆ, ಸಂಬಂಧಿಸಿದ ವಾಹನ ಮಾಲೀಕರ ವಿರುದ್ಧ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಭಾರತೀಯ ಮೋಟಾರು ವಾಹನ ಕಾಯ್ದೆಯ ಕಲಂ 199(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ, ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 18ರಂದು ತೀರ್ಪು ಪ್ರಕಟಿಸಿದ್ದು, ಇಬ್ಬರು ವಾಹನ ಮಾಲೀಕರಿಗೂ ತಲಾ ₹25 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಸಂಚಾರ ನಿಯಮ ಉಲ್ಲಂಘನೆ ಹಾಗೂ ಅಪ್ರಾಪ್ತರಿಂದ ವಾಹನ ಚಾಲನೆ ಹೆಚ್ಚುತ್ತಿರುವ ಹಿನ್ನೆಲೆ, ಬಂಟ್ವಾಳ ಸಂಚಾರ ಪೊಲೀಸರು ಮುಂದೆಯೂ ವಿಶೇಷ ತಪಾಸಣೆ ಮುಂದುವರಿಸುವುದಾಗಿ ತಿಳಿದುಬಂದಿದೆ. ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಪೋಷಕರು ತಮ್ಮ ಮಕ್ಕಳಿಗೆ ವಾಹನ ನೀಡುವ ಮುನ್ನ ಕಾನೂನು ಪರಿಣಾಮಗಳನ್ನು ಅರಿತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.