ಡೈಲಿವಾರ್ತೆ: 19/ಮೇ/2026

ರಾಜ್ಯಾದ್ಯಂತ ನಾಳೆ ಮೆಡಿಕಲ್ ಶಾಪ್ ಬಂದ್ ಭೀತಿ: ಬಸ್ ಮುಷ್ಕರದ ನಡುವೆಯೇ ಜನತೆಗೆ ಮತ್ತೊಂದು ಆಘಾತ

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಸಾರಿಗೆ ನೌಕರರ ಮುಷ್ಕರದ ಆತಂಕ ಕಾಡುತ್ತಿರುವ ನಡುವೆಯೇ, ಜನಸಾಮಾನ್ಯರಿಗೆ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗುವ ಸಾಧ್ಯತೆ ಕಂಡುಬಂದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ದೇಶವ್ಯಾಪಿ ಖಾಸಗಿ ಔಷಧ ಮಳಿಗೆಗಳ ಬಂದ್‌ಗೆ ಕರೆ ನೀಡಲಾಗಿದ್ದು, ಕರ್ನಾಟಕದಲ್ಲೂ ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ಹಲವೆಡೆ ಖಾಸಗಿ ಮೆಡಿಕಲ್ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದ್ದು, ತುರ್ತು ಸಂದರ್ಭಗಳಲ್ಲಿ ಔಷಧಗಳು ಲಭ್ಯವಾಗುವುದೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ. ವಿಶೇಷವಾಗಿ ಸಾರಿಗೆ ಸೇವೆ ಸ್ಥಗಿತದ ಭೀತಿ ನಡುವೆ ಔಷಧ ಸೌಲಭ್ಯಕ್ಕೂ ವ್ಯತ್ಯಯ ಉಂಟಾಗುವ ಸಾಧ್ಯತೆ ಜನರನ್ನು ಇನ್ನಷ್ಟು ಕಳವಳಕ್ಕೀಡು ಮಾಡಿದೆ.

ಖಾಸಗಿ ಔಷಧ ಮಳಿಗೆಗಳ ಮಾಲೀಕರು ಮತ್ತು ವಿತರಕರ ವಿವಿಧ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ, ಆನ್‌ಲೈನ್ ಇ-ಫಾರ್ಮಸಿ ವೇದಿಕೆಗಳಲ್ಲಿ ಸೂಕ್ತ ವೈದ್ಯರ ಲಿಖಿತ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧ ಮಾರಾಟ ನಡೆಯುತ್ತಿರುವುದಕ್ಕೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಇಂತಹ ನಿಯಮಬಾಹಿರ ಮಾರಾಟದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಪಿಸಿರುವ ಔಷಧ ವ್ಯಾಪಾರಿಗಳು, ದೊಡ್ಡ ಕಾರ್ಪೊರೇಟ್ ಕಂಪನಿಗಳು ಭಾರಿ ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಸಾಂಪ್ರದಾಯಿಕ ಮೆಡಿಕಲ್ ಶಾಪ್‌ಗಳು ಭಾರೀ ನಷ್ಟ ಅನುಭವಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಔಷಧ ವ್ಯಾಪಾರಿಗಳ ಸಂಘಟನೆಗಳಾದ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ (KCDA) ಹಾಗೂ ಕರ್ನಾಟಕ ಫಾರ್ಮಾ ರಿಟೇಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆರ್ಗನೈಸೇಷನ್ (KPRDO) ಸೇರಿದಂತೆ ಹಲವು ಒಕ್ಕೂಟಗಳು ಬಂದ್‌ಗೆ ಬೆಂಬಲ ಸೂಚಿಸಿವೆ.

ಆದರೆ ಆಸ್ಪತ್ರೆಗಳ ಆವರಣದಲ್ಲಿರುವ ಫಾರ್ಮಸಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ತುರ್ತು ಆರೋಗ್ಯ ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.

ಇದರ ನಡುವೆಯೇ, ನಾಳೆ ಅಗತ್ಯ ಔಷಧಗಳು ಸಿಗುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮವಾಗಿ ಇಂದೇ ಅಗತ್ಯ ಔಷಧಗಳನ್ನು ಖರೀದಿಸಿಟ್ಟುಕೊಳ್ಳುವುದು ಸೂಕ್ತ ಎಂದು ಆರೋಗ್ಯ ವಲಯದ ತಜ್ಞರು ಸಲಹೆ ನೀಡಿದ್ದಾರೆ.