



ಡೈಲಿವಾರ್ತೆ: 19/ಮೇ/2026

ಕೋಟ: ಹೆದ್ದಾರಿ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ – ಟಿಪ್ಪರ್ ಲೋಡರ್ ದುರ್ಮರಣ

ಕೋಟ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಮಂಗಳವಾರ ಸಂಜೆ ಕೋಟ ಶಾಂಭವಿ ಶಾಲೆ ಎದುರು ನಡೆದಿದೆ.

ಮೃತರನ್ನು ಕೋಟ ಗಿಳಿಯಾರಿನ ಕೃಷ್ಣ ದೇವಾಡಿಗ (60) ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಟಿಪ್ಪರ್ ಲೋಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮಾಹಿತಿಯ ಪ್ರಕಾರ, ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಬಂದಿದ್ದ ಕೃಷ್ಣ ದೇವಾಡಿಗ ಅವರು ಹೆದ್ದಾರಿ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಸಾಲಿಗ್ರಾಮದಿಂದ ಕೋಟ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರು ನೇರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕೃಷ್ಣ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ತಕ್ಷಣ ಕೋಟ ಜೀವನ ಮಿತ್ರ ನಾಗರಾಜ್ ಪುತ್ರನ್ ಹಾಗೂ ಕಿಶೋರ್ ಶೆಟ್ಟಿ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣ ದೇವಾಡಿಗ ಅವರು ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿದು ಕೋಟ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.