ಡೈಲಿವಾರ್ತೆ: 20/ಮೇ/2026

ಇಂದು ದೇಶದಾದ್ಯಂತ ಮೆಡಿಕಲ್ ಶಾಪ್ ಬಂದ್: ಆನ್‌ಲೈನ್ ಔಷಧಿ ಮಾರಾಟ ವಿರೋಧಿಸಿ ವ್ಯಾಪಾರಿಗಳ ಪ್ರತಿಭಟನೆ

ಬೆಂಗಳೂರು, ಮೇ 20: ಆನ್‌ಲೈನ್ ಇ-ಫಾರ್ಮಸಿಗಳು ಹಾಗೂ ಕ್ವಿಕ್ ಕಾಮರ್ಸ್ ಆಪ್‌ಗಳ ಮೂಲಕ ಕಾನೂನು ಬಾಹಿರವಾಗಿ ಔಷಧಿ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ, ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ (ಎಐಒಸಿಡಿ) ದೇಶವ್ಯಾಪಿ ಮೆಡಿಕಲ್ ಶಾಪ್ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ, ಕರ್ನಾಟಕದಲ್ಲಿಯೂ ಇಂದು ಸಾವಿರಾರು ಮೆಡಿಕಲ್ ಅಂಗಡಿಗಳು ಬಂದ್ ಆಗಿವೆ.

ರಾಜ್ಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘವೂ ಬಂದ್‌ಗೆ ಬೆಂಬಲ ಸೂಚಿಸಿದ್ದು, ರಾಜ್ಯಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಒಂದು ದಿನದ ಮಟ್ಟಿಗೆ ಸಂಪೂರ್ಣವಾಗಿ ಬಾಗಿಲು ಮುಚ್ಚಿವೆ. ರಾಜಧಾನಿ ಬೆಂಗಳೂರೊಂದರಲ್ಲೇ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮೆಡಿಕಲ್ ಅಂಗಡಿಗಳು ಬಂದ್ ಆಗಿರುವುದಾಗಿ ತಿಳಿದುಬಂದಿದೆ.

ಆನ್‌ಲೈನ್ ಮೂಲಕ ನಿಯಂತ್ರಣರಹಿತ ಔಷಧಿ ಮಾರಾಟದಿಂದ ಗ್ರಾಹಕರ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಇಂತಹ ವ್ಯಾಪಾರವನ್ನು ತಕ್ಷಣ ನಿಯಂತ್ರಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

ಇದರ ಮಧ್ಯೆ, ಬೆಂಗಳೂರು ಫಾರ್ಮ್ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಫೋರಂನಿಂದ ಹೊರಬಂದ ಕೆಲ ಸದಸ್ಯರು ಪ್ರತ್ಯೇಕ ಸಂಘ ರಚಿಸಿಕೊಂಡು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಬಹುತೇಕ ಮೆಡಿಕಲ್ ಮಾಲೀಕರು ಬಂದ್‌ಗೆ ಬೆಂಬಲ ನೀಡಿ ಅಂಗಡಿಗಳನ್ನು ಮುಚ್ಚಿರುವುದು ಗಮನ ಸೆಳೆದಿದೆ.

ಬಂದ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಒಳಗೆ ಕಾರ್ಯನಿರ್ವಹಿಸುತ್ತಿರುವ ಫಾರ್ಮಸಿಗಳು ಎಂದಿನಂತೆ ಸೇವೆ ನೀಡಲಿವೆ. ಜೊತೆಗೆ ತುರ್ತು ಸಂದರ್ಭಗಳಲ್ಲಿ ಅಗತ್ಯ ಔಷಧಿಗಳನ್ನು ಒದಗಿಸಲು ಆಯ್ದ ಪ್ರಮುಖ ಕೇಂದ್ರಗಳಲ್ಲಿ ತುರ್ತು ಕೌಂಟರ್‌ಗಳನ್ನು ತೆರೆಯಲಾಗಿದೆ.

ತುರ್ತು ಆರೋಗ್ಯ ಸಮಸ್ಯೆ ಎದುರಾದಲ್ಲಿ ಸಾರ್ವಜನಿಕರು ಆಸ್ಪತ್ರೆಗಳ ಫಾರ್ಮಸಿಗಳ ಸೇವೆಯನ್ನು ಪಡೆಯಬಹುದಾಗಿದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.