ಡೈಲಿವಾರ್ತೆ: 20/ಮೇ/2026

ಹುಬ್ಬಳ್ಳಿಯಲ್ಲಿ ಪ್ರೇಮಿಗಳ ಮೇಲೆ ದಾಳಿ “ಲವ್ ಜಿಹಾದ್” ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿ?

ಹುಬ್ಬಳ್ಳಿ: ನಗರದಲ್ಲಿ ಮತ್ತೊಮ್ಮೆ ನೈತಿಕ ಪೊಲೀಸ್‌ಗಿರಿಯ ಆರೋಪ ಕೇಳಿಬಂದಿದ್ದು, ಏಕಾಂತದಲ್ಲಿ ಭೇಟಿಯಾಗಿದ್ದ ಪ್ರೇಮಿಗಳಿಬ್ಬರ ಮೇಲೆ ಕೆಲ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ಇದೀಗ ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.
ಮಾಹಿತಿಯ ಪ್ರಕಾರ, ಅನ್ಯ ಧರ್ಮದ ಯುವಕ ಮತ್ತು ಯುವತಿ ಏಕಾಂತದಲ್ಲಿ ಭೇಟಿಯಾಗಿದ್ದ ವೇಳೆ ಕೆಲ ಸಂಘಟನೆ ಯುವಕರು ಸ್ಥಳಕ್ಕೆ ದೌಡಾಯಿಸಿ, ಅವರನ್ನು ಪ್ರಶ್ನಿಸುವ ನೆಪದಲ್ಲಿ ಗಲಾಟೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

“ಲವ್ ಜಿಹಾದ್” ಪ್ರಕರಣವೆಂದು ಆರೋಪಿಸಿದ ಕಾರ್ಯಕರ್ತರು, ಸ್ಥಳದಲ್ಲೇ ವಿಡಿಯೋ ಚಿತ್ರೀಕರಣ ನಡೆಸಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಯುವಕನನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಯುವಕ ಹಾಗೂ ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಯಾವುದೇ ವ್ಯಕ್ತಿಗೆ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಇಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಈ ಘಟನೆ ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ನೈತಿಕ ಪೊಲೀಸ್‌ಗಿರಿ, ಧರ್ಮದ ಹೆಸರಿನ ಹಸ್ತಕ್ಷೇಪ ಮತ್ತು ಯುವಜನರ ವೈಯಕ್ತಿಕ ಹಕ್ಕುಗಳ ಕುರಿತು ತೀವ್ರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.