ಡೈಲಿವಾರ್ತೆ: 04/ಜೂ./2026

ಕುಕ್ಕುಜೆ ಸರ್ಕಾರಿ ಶಾಲಾ ಶಿಕ್ಷಕರ ಬೇಜವಾಬ್ದಾರಿತನ: ಕಸ ಸುಡುವಾಗ ನಿಗೂಢ ವಸ್ತು ಸ್ಫೋಟ – ನಾಲ್ಕು ಮಕ್ಕಳಿಗೆ ಗಾಯ, ಶಿಕ್ಷಕರ ವಿರುದ್ಧ ಪ್ರಕರಣ ದಾಖಲು

​ಅಜೆಕಾರು: ಶಾಲಾ ದೈಹಿಕ ಶಿಕ್ಷಕರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ ಕಸಕ್ಕೆ ಬೆಂಕಿ ಹಚ್ಚುತ್ತಿದ್ದ ನಾಲ್ಕು ಮಂದಿ ಶಾಲಾ ವಿದ್ಯಾರ್ಥಿಗಳು ಸ್ಫೋಟದ ತೀವ್ರತೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಕಡ್ತಲ ಗ್ರಾಮದ ಕುಕ್ಕುಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

​ಘಟನೆಯ ವಿವರ:
​ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಅಶೋಕ ನಗರದ ನಿವಾಸಿ ನಿತ್ಯಾನಂದ ನಾಯಕ್ ಅವರ ಮಗ ಸಂಸ್ಕೃತ್ (12) ಕುಕ್ಕುಜೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ದಿನಾಂಕ 03/06/2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಯ ವೇಳೆಗೆ, ಶಾಲೆಯ ದೈಹಿಕ ಶಿಕ್ಷಕರು ಕಂಪ್ಯೂಟರ್ ಕ್ಲಾಸ್ ಕ್ಲೀನ್ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.
​ಶಿಕ್ಷಕರ ಆದೇಶದಂತೆ ವಿದ್ಯಾರ್ಥಿಗಳು ಕಂಪ್ಯೂಟರ್ ಕೋಣೆಯನ್ನು ಸ್ವಚ್ಛಗೊಳಿಸಿ, ಅಲ್ಲಿಂದ ಸಂಗ್ರಹಿಸಿದ ಕಸವನ್ನು ಶಾಲಾ ಕಾಂಪೌಂಡ್‌ನ ಒಂದು ಕಡೆ ತಂದು ಹಾಕಿದ್ದರು. ಬಳಿಕ ಆ ಕಸಕ್ಕೆ ಬೆಂಕಿ ಹಚ್ಚಿ ಸುಡುವಂತೆ ಶಿಕ್ಷಕರು ಮಕ್ಕಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.


​ಶಿಕ್ಷಕರು ಹೇಳಿದಂತೆ ವಿದ್ಯಾರ್ಥಿಗಳಾದ ಸಂಸ್ಕೃತ್ (12), ಗಗನ್ (12), ಹೃತ್ವಿಕ್ (12) ಹಾಗೂ ಶಾಲಾ ಶಿಕ್ಷಕಿ ಅರುಣಾಕ್ಷಿ ಅವರ ಸಂಬಂಧಿ, ಅಮೃತ ಭಾರತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅದ್ವಿನ್ (11) ಒಟ್ಟಾಗಿ ಕಸಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲಿ ಕಸದ ರಾಶಿಯಲ್ಲಿದ್ದ ಯಾವುದೋ ಒಂದು ಅನಾಮಧೇಯ ಡಬ್ಬದಂತಹ ವಸ್ತು ತೀವ್ರ ತರಹದಲ್ಲಿ ಸ್ಫೋಟಗೊಂಡಿದೆ.
​ಸ್ಫೋಟದ ತೀವ್ರತೆಗೆ ಸಿಲುಕಿದ ನಾಲ್ಕೂ ಮಕ್ಕಳಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಗಾಯಾಳು ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸಣ್ಣ ವಯಸ್ಸಿನ ಶಾಲಾ ಮಕ್ಕಳಿಗೆ ಬೆಂಕಿ ಹಚ್ಚುವಂತಹ ಅಪಾಯಕಾರಿ ಕೆಲಸವನ್ನು ವಹಿಸುವಾಗ ಶಾಲಾ ಮಂಡಳಿ ಹಾಗೂ ಶಿಕ್ಷಕರು ಯಾವುದೇ ಸೂಕ್ತ ಮುಂಜಾಗ್ರತೆ ವಹಿಸದಿರುವುದೇ ಈ ದುರಂತಕ್ಕೆ ನೇರ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿ ಸಂಸ್ಕೃತ್‌ನ ತಂದೆ ನಿತ್ಯಾನಂದ ನಾಯಕ್ ಅವರು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಲಾಗಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡಿದ ಕೃತ್ಯದ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 19/2026, ಕಲಂ: 287 BNS (Bharatiya Nyaya Sanhita) ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ