



ಡೈಲಿವಾರ್ತೆ: 06/ಜೂ./2026


ಮಂಗಳೂರಿನಲ್ಲಿ ವಿದ್ಯಾರ್ಥಿಗಳೇ ಟಾರ್ಗೆಟ್: 16 ಲಕ್ಷದ ಎಂಡಿಎಂಎ ಸಹಿತ ಇಬ್ಬರು ‘ರೌಡಿ ಶೀಟರ್’ ಡ್ರಗ್ ಪೆಡ್ಲರ್‌ಗಳ ಬಂಧನ

ಮಂಗಳೂರು, ಜೂನ್ 6: ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಗರದಲ್ಲಿ ಸಿಂಥೆಟಿಕ್ ಮಾದಕ ವಸ್ತುವಾದ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಭೇದಿಸಿದ್ದಾರೆ.
ನಡೆಸಲಾದ ಎರಡು ಪ್ರತ್ಯೇಕ ಸರಣಿ ದಾಳಿಗಳಲ್ಲಿ ಇಬ್ಬರು ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು 16.40 ಲಕ್ಷ ರೂಪಾಯಿ ಮೌಲ್ಯದ 164 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಹೊಯಿಗೆ ಬಜಾರ್‌ನಲ್ಲಿ ದಾಳಿ: ಪ್ರಣಾಮ್ ಕೋಟ್ಯಾನ್ ಬಂಧನ

ಬೆಂಗಳೂರಿನಿಂದ ಬೃಹತ್ ಪ್ರಮಾಣದಲ್ಲಿ ಎಂಡಿಎಂಎ ಮಾದಕ ವಸ್ತುವನ್ನು ಖರೀದಿಸಿ ತಂದು, ಮಂಗಳೂರಿನ ಹೊಯಿಗೆ ಬಜಾರ್ ಪರಿಸರದ ಮನೆಯೊಂದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.
ಜೂನ್ 5ರಂದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಜಂಟಿ ದಾಳಿ ನಡೆಸಿ ಪ್ರಣಾಮ್ ಕೋಟ್ಯಾನ್ (30) ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ 104 ಗ್ರಾಂ (ಮೌಲ್ಯ ಸುಮಾರು ರೂ. 10.40 ಲಕ್ಷ) ಎಂಡಿಎಂಎ ಹಾಗೂ ಡಿಜಿಟಲ್ ತೂಕಮಾಪನ ಯಂತ್ರ, ಜಿಪ್‌ಲಾಕ್ ಕವರ್‌ಗಳು, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ಪ್ರಣಾಮ್ ಕೋಟ್ಯಾನ್ ಹಳೇ ಅಪರಾಧಿಯಾಗಿದ್ದು, ಈತನ ವಿರುದ್ಧ ಈಗಾಗಲೇ ಮಂಗಳೂರು ದಕ್ಷಿಣ, ಉತ್ತರ ಪೊಲೀಸ್ ಠಾಣೆಗಳು ಹಾಗೂ ಅಬಕಾರಿ ಇಲಾಖೆಯಲ್ಲಿ ಕೊಲೆ ಬೆದರಿಕೆ, ಗಾಂಜಾ ಸೇವನೆ ಮತ್ತು ಮಾರಾಟ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿವೆ. ಪ್ರಸ್ತುತ ಈ ದಾಳಿಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಮೊಕದ್ದಮೆ ಹೂಡಲಾಗಿದೆ.
ಪದವಿನಂಗಡಿಯಲ್ಲಿ ಮತ್ತೊಬ್ಬ ಪೆಡ್ಲರ್ ಧನರಾಜ್ ಪೂಜಾರಿ ಅರೆಸ್ಟ್:

ಸಿಸಿಬಿ ಪೊಲೀಸರು ನಡೆಸಿದ ಮತ್ತೊಂದು ಮಿಂಚಿನ ಕಾರ್ಯಾಚರಣೆಯಲ್ಲಿ ಪದವಿನಂಗಡಿ ಪರಿಸರದ ಮನೆಯೊಂದರ ಮೇಲೆ ದಾಳಿ ನಡೆಸಿ, ಮಾದಕ ದ್ರವ್ಯ ಮಾರಾಟ ಜಾಲದಲ್ಲಿ ತೊಡಗಿದ್ದ ಧನರಾಜ್ ಪೂಜಾರಿ ಅಲಿಯಾಸ್ ಧನು ವಳಚಿಲ್ (33) ಎಂಬಾತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆತನಿಂದ 60 ಗ್ರಾಂ (ಮೌಲ್ಯ ಸುಮಾರು ರೂ. 6 ಲಕ್ಷ) ಎಂಡಿಎಂಎ ಹಾಗೂ ಮೊಬೈಲ್ ಫೋನ್, ಜಿಪ್‌ಲಾಕ್ ಕವರ್‌ಗಳು ಮತ್ತು ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಧನರಾಜ್ ಪೂಜಾರಿ ವಿರುದ್ಧ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ (ದಕ್ಷಿಣ, ಉತ್ತರ, ಸುರತ್ಕಲ್, ಬರ್ಕೆ, ಕಾವೂರು, ಕಂಕನಾಡಿ) ಹಾಗೂ ಬಂಟ್ವಾಳ ಠಾಣೆಯಲ್ಲಿ ಕೊಲೆ, ಕೊಲೆಯತ್ನ, ಮಾರಣಾಂತಿಕ ಹಲ್ಲೆ ಮತ್ತು ಜೀವಬೆದರಿಕೆ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ.
2016ರಲ್ಲಿ ನಡೆದಿದ್ದ ಗಂಭೀರ ಹಲ್ಲೆ ಪ್ರಕರಣವೊಂದರಲ್ಲಿ ಈತನಿಗೆ ನ್ಯಾಯಾಲಯವು 3 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನೂ ವಿಧಿಸಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. ಈತನ ವಿರುದ್ಧ ಈಗ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ನಗರದ ಯುವ ಸಮೂಹ ಹಾಗೂ ವಿದ್ಯಾರ್ಥಿಗಳನ್ನು ತುತ್ತಾಗಿಸುತ್ತಿರುವ ಈ ಬೃಹತ್ ಡ್ರಗ್ ಜಾಲದ ಹಿಂದೆ ಇನ್ನೂ ಹಲವು ಪ್ರಭಾವಿ ವ್ಯಕ್ತಿಗಳು ಹಾಗೂ ಪೆಡ್ಲರ್‌ಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಜಾಲದ ಮೂಲವನ್ನು ಪತ್ತೆಹಚ್ಚಲು ಮತ್ತು ಉಳಿದ ಆರೋಪಿಗಳನ್ನು ಬಂಧಿಸಲು ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.