ಡೈಲಿವಾರ್ತೆ: 09/ಜೂ./2026

ಉಜ್ವಲ ಯೋಜನೆಗೆ ದೊಡ್ಡ ಕಡಿತ: ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆ 12ರಿಂದ 4ಕ್ಕೆ ಇಳಿಸಿದ ಕೇಂದ್ರ ಸರಕಾರ

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿ ಹೊಂದಿದ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಸಂಖ್ಯೆಯನ್ನು ಮತ್ತೊಮ್ಮೆ ಕಡಿತಗೊಳಿಸಿದೆ. ಆರಂಭದಲ್ಲಿ ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ನೀಡಲಾಗುತ್ತಿದ್ದರೆ, ಕಳೆದ ವರ್ಷ ಅದನ್ನು 9ಕ್ಕೆ ಇಳಿಸಲಾಗಿತ್ತು. ಇದೀಗ ವಾರ್ಷಿಕ ಮಿತಿಯನ್ನು ಕೇವಲ 4 ಸಿಲಿಂಡರ್‌ಗಳಿಗೆ ಇಳಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
2016ರ ಮೇ ತಿಂಗಳಲ್ಲಿ ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ ರಹಿತ ಎಲ್‌ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಉಜ್ವಲ ಯೋಜನೆಯನ್ನು ಆರಂಭಿಸಲಾಗಿತ್ತು. ಶುದ್ಧ ಅಡುಗೆ ಇಂಧನ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು 2022ರಲ್ಲಿ ಪ್ರತಿ 14.2 ಕೆಜಿ ಸಿಲಿಂಡರ್‌ಗೆ 200 ರೂ. ಸಬ್ಸಿಡಿ ನೀಡುವ ಯೋಜನೆ ಜಾರಿಗೆ ತಂದಿತ್ತು. ಬಳಿಕ 2023ರ ಅಕ್ಟೋಬರ್‌ನಲ್ಲಿ ಸಬ್ಸಿಡಿ ಮೊತ್ತವನ್ನು 300 ರೂ.ಗಳಿಗೆ ಹೆಚ್ಚಿಸಲಾಗಿತ್ತು.

ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನೂಜಾ ಉಜ್ವಲ ಯೋಜನೆಯ ಫಲಾನುಭವಿಗಳ ಸರಾಸರಿ ವಾರ್ಷಿಕ LPG ಬಳಕೆಯ ಆಧಾರದ ಮೇಲೆ ಹೊಸ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರ ಮಧ್ಯೆ ದೇಶದಲ್ಲಿ ಅಡುಗೆ ಅನಿಲ ದರಗಳು ನಿರಂತರ ಏರಿಕೆಯಾಗುತ್ತಿವೆ. ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆಯಾಗಿದ್ದು, ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆ LPG ಸಿಲಿಂಡರ್‌ನ ಬೆಲೆ ಒಟ್ಟು 89 ರೂ. ಹೆಚ್ಚಳ ಕಂಡಿದೆ. ಜೂನ್ 7ರಂದು ನಡೆದ ಇತ್ತೀಚಿನ ಏರಿಕೆಯ ನಂತರ ಸಿಲಿಂಡರ್ ಬೆಲೆ 942 ರೂ.ಗಳಿಗೆ ತಲುಪಿದೆ. 300 ರೂ. ಸಬ್ಸಿಡಿಯನ್ನು ಕಡಿತಗೊಳಿಸಿದ ಬಳಿಕ ಉಜ್ವಲ ಯೋಜನೆ ಫಲಾನುಭವಿಗಳು ಪ್ರತಿ ಸಿಲಿಂಡರ್‌ಗೆ 642 ರೂ. ಪಾವತಿಸಬೇಕಾಗಿದೆ.

ಎಲ್‌ಪಿಜಿ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮತ್ತು ಪೂರೈಕೆ ವ್ಯತ್ಯಯಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ LPG ಬೆಲೆಗಳು ಗಣನೀಯವಾಗಿ ಏರಿಕೆ ಕಂಡಿವೆ ಎಂದು ಹೇಳಿದೆ. ಆದಾಗ್ಯೂ, ಇಂತಹ ಪರಿಸ್ಥಿತಿಯಲ್ಲೂ ಭಾರತದಲ್ಲಿನ LPG ದರಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಹೋಲಿಸಿದರೆ ಕಡಿಮೆಯೇ ಇವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಅಧಿಕಾರಿಗಳ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಒಂದು 14.2 ಕೆಜಿ LPG ಸಿಲಿಂಡರ್ ಪೂರೈಕೆಗೆ ತೈಲ ಕಂಪನಿಗಳಿಗೆ 1,600 ರೂ.ಗಿಂತ ಹೆಚ್ಚು ವೆಚ್ಚವಾಗುತ್ತಿದ್ದು, ಪ್ರಸ್ತುತ ಮಾರಾಟ ದರದ ಹಿನ್ನೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ ಸುಮಾರು 700 ರೂ. ನಷ್ಟ ಅನುಭವಿಸುತ್ತಿವೆ. ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿಯೂ ತೈಲ ಕಂಪನಿಗಳು ನಷ್ಟದಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.
ಆದರೆ, ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವ ಕೇಂದ್ರದ ನಿರ್ಧಾರವು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.