ಡೈಲಿವಾರ್ತೆ: 07/ಜು./2026

ಸುಳ್ಯ: ತೂಗು ಸೇತುವೆಗಳ ಸರದಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಇನ್ನಿಲ್ಲ!

ಮಂಗಳೂರು, ಜು. 7: ಗ್ರಾಮೀಣ ಪ್ರದೇಶಗಳ ನದಿಗಳ ಇಕ್ಕೆಲದ ಜನರನ್ನು ತೂಗು ಸೇತುವೆಗಳ ಮೂಲಕ ಸಂಪರ್ಕಿಸಿ ಸಾವಿರಾರು ಮಂದಿಯ ಬದುಕಿಗೆ ಆಸರೆಯಾಗಿದ್ದ ಪದ್ಮಶ್ರೀ ಪುರಸ್ಕೃತ, “ತೂಗು ಸೇತುವೆಗಳ ಸರದಾರ” ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಸುಳ್ಯದ ತಮ್ಮ ನಿವಾಸದಲ್ಲಿ ನಿಧನರಾದರು.

ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಿರೀಶ್ ಭಾರದ್ವಾಜ್ ಅವರು 1989ರಲ್ಲಿ ಅರಂಬೂರು ಸಮೀಪ ಪಯಸ್ವಿನಿ ನದಿಗೆ ಮೊದಲ ತೂಗು ಸೇತುವೆ ನಿರ್ಮಿಸಿ ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದರು. ಬಳಿಕ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 150ಕ್ಕೂ ಅಧಿಕ ತೂಗು ಸೇತುವೆಗಳನ್ನು ನಿರ್ಮಿಸಿ ಸಾವಿರಾರು ಜನರಿಗೆ ಅನುಕೂಲ ಕಲ್ಪಿಸಿದ್ದರು.
ಸಮಾಜಮುಖಿ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಗೌರವಗಳನ್ನು ನೀಡಿ ಸನ್ಮಾನಿಸಿತ್ತು.

ಸರಳತೆ, ಸೇವಾ ಮನೋಭಾವ ಮತ್ತು ವಿನೂತನ ಎಂಜಿನಿಯರಿಂಗ್ ಮೂಲಕ ಜನಮನ ಗೆದ್ದಿದ್ದ ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಸಂತಾಪ ವ್ಯಕ್ತವಾಗಿದೆ.