


ಡೈಲಿವಾರ್ತೆ: 09/ಜು./2026


ಬೆಳಗಾವಿ ಸಂತೆ ಟು ಕೇರಳ: ಅಕ್ರಮವಾಗಿ ಎತ್ತುಗಳನ್ನು ಸಾಗಿಸುತ್ತಿದ್ದ ಲಾರಿ ಕಾವೂರು ಪೊಲೀಸರ ವಶಕ್ಕೆ – ಇಬ್ಬರು ಜೈಲಿಗೆ

ಮಂಗಳೂರು, ಜುಲೈ 9: ಬೆಳಗಾವಿಯ ಸಂತೆಯಲ್ಲಿ ಖರೀದಿಸಿದ್ದ 18 ಎತ್ತುಗಳನ್ನು ಹಿಂಸಾತ್ಮಕವಾಗಿ ಲಾರಿಯಲ್ಲಿ ತುಂಬಿಸಿ ಕೇರಳಕ್ಕೆ ಒಯ್ಯುತ್ತಿದ್ದಾಗ ಮಂಗಳೂರಿನ ಕೊಟ್ಟಾರದಲ್ಲಿ ಪೊಲೀಸರು ಅಡ್ಡಹಾಕಿದ್ದು ಗೋವುಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಕಾವೂರಿನ ಪೊಲೀಸರು ಕೊಟ್ಟಾರದ ಬಳಿ ಕಾರ್ಯಾಚಣೆ ನಡೆಸಿದ್ದು ಯಾವುದೇ ಪರವಾನಿಗೆ ಇಲ್ಲದೇ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 18 ಎತ್ತುಗಳನ್ನು ರಕ್ಷಿಸಿದ್ದಾರೆ. ಎತ್ತುಗಳನ್ನು ಬೆಳಗಾವಿಯ ಸಂತೆಯಲ್ಲಿ ಖರೀದಿಸಿದ್ದು ಎಂದು ತಿಳಿದುಬಂದಿದ್ದು ಲಾರಿ ಮಾಲೀಕ ಶೀತಲ್ ಸೂಚನೆಯಂತೆ ಕೇರಳದ ಪಾಲಕ್ಕಾಡ್ ಗೆ ಸಾಗಿಸಲಾಗುತ್ತಿತ್ತು.
ಪರವಾನಗಿ ಇಲ್ಲದೆ, ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಅಡ್ಡ ಹಾಕಿದ್ದಾರೆ. ಲಾರಿ ಚಾಲಕ ಬೆಳಗಾವಿಯ ಕೆ.ಆರ್ ನಗರ ನಿವಾಸಿ ರಾಘವೇಂದ್ರ ಹೆಚ್.ಎಂ (30), ಕ್ಲೀನರ್ ಹಾಸನದ ಹೇಮಂತ್ ಕುಮಾರ್ ಹೆಚ್.ಕೆ( 28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವಶಕ್ಕೆ ಪಡೆದ ಎತ್ತುಗಳನ್ನು ಪೊಲೀಸರು ಗೋಶಾಲೆಗೆ ಸಾಗಿಸಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.