


ಡೈಲಿವಾರ್ತೆ: 09/ಜು./2026


ಅಚ್ಲಾಡಿಯಲ್ಲಿ ನಂದಿಕೇಶ್ವರ ಪುಷ್ಕರಣಿ ಲೋಕಾರ್ಪಣೆ

ಕೋಟ, ಜು.9: ಶ್ರೀ ನಂದಿಕೇಶ್ವರ ಪುಷ್ಕರಣಿ ಅಭಿವೃದ್ಧಿ ಸಮಿತಿ ಅಚ್ಲಾಡಿ ಆಶ್ರಯದಲ್ಲಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ಅಭಿವೃದ್ಧಿಪಡಿಸಲಾದ ಶ್ರೀ ನಂದಿಕೇಶ್ವರ ಪುಷ್ಕರಣಿಯ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭ ಜು.9 ರಂದು ಜರಗಿತು.

ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರು ಪುಷ್ಕರಣಿಗೆ ಕ್ಷೀರಾರ್ಪಣೆ ಹಾಗೂ ಪುಷ್ಪಾರ್ಚನೆ ನೆರವೇರಿಸಿ, ಅಭಿವೃದ್ಧಿ ಕಾರ್ಯಗಳನ್ನೆಲ್ಲ ಸರಕಾರದ ಮೂಲಕವೇ ನೆರವೇರಿಸುವುದು ಕಷ್ಟ. ಆದ್ದರಿಂದ ಖಾಸಗಿ ಸಂಸ್ಥೆಗಳ ಸಿ.ಎಸ್.ಆರ್. ನಿಧಿಯಿಂದ ಒಂದಷ್ಟು ಅಭಿವೃದ್ಧಿ ನೆರವೇರಿಸಬೇಕಾಗುತ್ತದೆ. ಕೆರೆಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದರು.
ಶ್ರೀ ಕ್ಷೇತ್ರ ಗರಿಕೇಮಠದ ಶ್ರೀ ಆರ್ಕಗಣಪತಿ ದೇವಸ್ಥಾನದ ಆಗಮ ಪ್ರವೀಣ ಹಾಗೂ ಶೈವ ಸಿದ್ಧಾಂತಿ ವೇ.ಮೂ. ರಾಮಪ್ರಸಾದ ಅಡಿಗರು ಗಂಗಾಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿ, ಕೆರೆಗಳ ಪುನಃ ನಿರ್ಮಾಣದಿಂದ ಪರಮ ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ಕಾರ್ಯದಲ್ಲಿ ಪ್ರತ್ಯೇಕ, ಪರೋಕ್ಷವಾಗಿ ಸಹಕರಿಸಿದವರೆಲ್ಲ ಧನ್ಯರು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಂದಿಕೇಶ್ವರ ಪುಷ್ಕರಣಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ, ಬೆಂಗಳೂರು ವಿಐಪಿ ಶಾಲೆಯ ಪ್ರಾಂಶುಪಾಲೆ ಸಾಕಮ್ಮ ಕೆ. ಶೆಟ್ಟಿ ವಹಿಸಿದ್ದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ಜಿ.ಜಿ.ಎಂ. (ಎಚ್.ಆರ್.) ಪ್ರಶಾಂತ್ ಶಂಕರ್ ಪಡುವಾಳ್ ಪುಷ್ಕರಣಿಯನ್ನು ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಎಂ.ಆರ್.ಪಿ.ಎಲ್. ಸಿ.ಎಸ್.ಆರ್. ನಿಧಿಯ ಮುಖ್ಯಸ್ಥ ಮಂದಾರ ವಿ. ಖಾಳೆ, ಕುಂದಾಪುರ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಜನಸೇವಾ ಟ್ರಸ್ಟ್‌ನ ಪ್ರವರ್ತಕ ವಸಂತ ಗಿಳಿಯಾರ್, ಗುತ್ತಿಗೆದಾರ ಕೃಷ್ಣ ಹೆಗ್ಡೆ, ಎಂ.ಆರ್.ಪಿ.ಎಲ್. ಸಿ.ಎಸ್.ಆರ್. ಮುಖ್ಯಸ್ಥ ಹರೀಶ್ ರಾವ್, ಎಚ್.ಆರ್. ವಿಭಾಗದ ನವೀನ್ ಶಂಕರ್ ಹಾಗೂ ವಡ್ಡರ್ಸೆ ಗ್ರಾ.ಪಂ. ಮಾಜಿ ಅಧ್ಯಕ್ಷ ಲೋಕೇಶ್ ಕಾಂಚನ್ ಉಪಸ್ಥಿತರಿದ್ದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್ ಆಚಾರ್ಯ ಸ್ವಾಗತಿಸಿ, ಕೆರೆ ಪುನಃ ನಿರ್ಮಾಣಕ್ಕೆ ಸಹಕರಿಸಿದ ಸಂತೋಷ್ ಶೆಟ್ಟಿ (ಉಪ್ಪರಿಗೆಮನೆ) ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿ, ಸುಭಾಷ್ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ದಿನೇಶ್ ಶೆಟ್ಟಿ ವಂದಿಸಿದರು.