


ಡೈಲಿವಾರ್ತೆ: 10/ಜು./2026


ಉಡುಪಿ ಜಿಲ್ಲಾ ಸರ್ಜನ್ ವಿರುದ್ಧ ಗಂಭೀರ ಆರೋಪ:
ಅಮಾನತಿಗೆ ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಅಗ್ರಹ!

ಉಡುಪಿ, ಜು.10: ಉಡುಪಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಅಶೋಕ್ ಅವರ ವಿರುದ್ಧ ರಕ್ತ ವ್ಯಾಪಾರ ಪ್ರಕರಣ, ಅರ್ಹತೆ, ಆಡಳಿತ ವೈಫಲ್ಯ ಹಾಗೂ ಸಿಬ್ಬಂದಿಗೆ ಕಿರುಕುಳ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ಟರ್ ಅವರು ತಕ್ಷಣವೇ ಡಾ. ಅಶೋಕ್ ಅವರನ್ನು ಅಮಾನತುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ರಕ್ತ ವ್ಯಾಪಾರ ಆರೋಪದ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಸ್ಪಷ್ಟೀಕರಣದ ಬಗ್ಗೆಯೂ ಪ್ರಶ್ನೆ ಎತ್ತಿರುವ ಅವರು, ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಸುಂದರ್ ಮಾಸ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಡಾ. ಅಶೋಕ್ ಅವರ ವಿರುದ್ಧ ಸಿಬ್ಬಂದಿಗೆ ಕಿರುಕುಳ ನೀಡಿರುವುದು, ಜಿಲ್ಲಾ ಸರ್ಜನ್ ಹುದ್ದೆಯ ಅರ್ಹತೆ ಕುರಿತು ಅನುಮಾನಗಳು, ಆಡಳಿತಾತ್ಮಕ ಕ್ರಮಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಹಾಗೂ ವರ್ಗಾವಣೆಯ ಬಳಿಕವೂ ಕರ್ತವ್ಯ ನಿರ್ವಹಿಸಿರುವ ಕುರಿತು ತನಿಖೆ ನಡೆಸಬೇಕೆಂದು ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.
ಇದಲ್ಲದೆ, ಕೆಲ ಸಂಘಟನೆಗಳ ಮುಖಂಡರನ್ನು ಬಳಸಿಕೊಂಡು ದೂರುಗಳನ್ನು ದಾಖಲಿಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಈ ಎಲ್ಲಾ ಆರೋಪಗಳ ಬಗ್ಗೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಂಶವನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದ್ದಾರೆ.
ಡಾ. ಅಶೋಕ್ ಅವರನ್ನು ತಕ್ಷಣ ಅಮಾನತುಗೊಳಿಸಿ ಕಾನೂನುಬದ್ಧ ತನಿಖೆ ಆರಂಭಿಸದಿದ್ದರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಸುಂದರ ಮಾಸ್ಟರ್ ಎಚ್ಚರಿಕೆ ನೀಡಿದ್ದಾರೆ.