ಡೈಲಿವಾರ್ತೆ: 17/ಜು./2026

ನೀಟ್‌ನಲ್ಲಿ ಕುಂದಾಪುರ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಮೋಘ ಸಾಧನೆ: ರಾಜ್ಯ ಮಟ್ಟದಲ್ಲಿ ಮಿಂಚಿದ ಗ್ರಾಮೀಣ ಪ್ರತಿಭೆಗಳು

ಕುಂದಾಪುರ, ಜುಲೈ 17: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಉನ್ನತ ಗುರಿ ತಲುಪಿಸುವ ಧ್ಯೇಯದೊಂದಿಗೆ ಆರಂಭವಾದ ಕುಂದಾಪುರ ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ವಿದ್ಯಾಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತುಪಡಿಸಿದೆ. 2026ನೇ ಸಾಲಿನ ನೀಟ್ (NEET) ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

2012ರಲ್ಲಿ ಕೇವಲ 40 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಈ ಶಿಕ್ಷಣ ಸಂಸ್ಥೆ ಇಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಗ್ರಾಮೀಣ ಪ್ರತಿಭೆಗಳಿಗೆ ಆಶಾಕಿರಣವಾಗಿ ಬೆಳೆಯುತ್ತಿದೆ. ಸಂಸ್ಥಾಪಕ ಎಂ. ಮಹೇಶ್ ಹೆಗ್ಡೆ ಅವರ ಕನಸಿನ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್, ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ.
ಈ ವರ್ಷವೂ ಬೋರ್ಡ್ ಪರೀಕ್ಷೆಗಳು, ಸಿಇಟಿ, ಜೆಇಇ, ಸಿಎ ಹಾಗೂ ಸಿಎಸ್ ಪರೀಕ್ಷೆಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸಿರುವ ಸಂಸ್ಥೆ, ಇದೀಗ ನೀಟ್ ಫಲಿತಾಂಶದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿ ತನ್ನ ಸಾಧನೆಯ ಪರಂಪರೆಯನ್ನು ಮುಂದುವರಿಸಿದೆ.

ನೀಟ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ರುಮೇಜ್ (600), ರಶ್ಮಿ (573), ಶ್ರೇಯ ಎನ್.ಡಿ. (513), ವಡ್ಡೆ ಮನೋಹರ್ (511), ಮಾನಿಂಗ್ ಶ್ರೀಕಾಂತ್ ಮೇದಾರ್ (508), ಶ್ರೀಶ್ ವಿ. (503), ಬಾಲಗೌಡ (502), ಪದ್ಮಶ್ರೀ ವಿ.ಎನ್. (496), ಪ್ರವೀಣ್ (495), ಸೃಜನ್ ಗಾಣಿಗ (480), ಐಶ್ವರ್ಯ (474) ಹಾಗೂ ರಕ್ಷಾ ಶೆಟ್ಟಿ (466) ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳು, ಬೋಧಕ ವೃಂದ ಹಾಗೂ ಪೋಷಕರನ್ನು ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ಮತ್ತು ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಅಭಿನಂದಿಸಿ, ಮುಂದಿನ ದಿನಗಳಲ್ಲಿಯೂ ಇದೇ ಸಾಧನೆಯ ಹಾದಿಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದರು.