ಡೈಲಿ ವಾರ್ತೆ : 02 ಮೇ 2022

ಮೈಸೂರು: ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ನಿನ್ನೆ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸಿಡಿಲು ಬಡಿದು 50ಕ್ಕೂ ಅಡಿಕೆ, ತೆಂಗಿನ ಮರಗಳು ಭಸ್ಮವಾಗಿದ್ದರೆ, ಬಿಳಿಕೆರೆಯಲ್ಲಿ ಸಿಡಿಲಿಗೆ ಎರಡು ಹಸುಗಳು ಬಲಿಯಾಗಿವೆ. ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿವೆ.

ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳು ಹಾಗೂ ಮರಗಳು ಧರೆಗುರುಳಿವೆ. ಇಟ್ಟಿಗೆ ಫ್ಯಾಕ್ಟರಿಯ ಮೇಲ್ಬಾವಣಿ ಹಾರಿ ಹೋಗಿದೆ.

ನಗರದ ಮಂಜುನಾಥ, ನ್ಯೂ ಮಾರುತಿ ಹಾಗೂ ಸಾಕೇತ ಬಡಾವಣೆಯ ಕೆಲ ಮನೆಯೊಳಗೆ ಮಳೆ ನೀರಿನೊಂದಿಗೆ ಚರಂಡಿ ನೀರು ನುಗ್ಗಿ ದಿನಸಿ ಸಾಮಗ್ರಿಗಳು ನೀರಿನಲ್ಲಿ ತೊಯ್ದು ಹೋಗಿದೆ.


ಹುಣಸೂರು-ಮೈಸೂರು ಹೆದ್ದಾರಿಯ ಹತ್ತಾರು ಕಡೆ ಮರಗಳು ನೆಲಕ್ಕುರುಳಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು. ಹನಗೋಡು ಹೋಬಳಿಯ ಹೊಸಪೆಂಜಳ್ಳಿ ಸುತ್ತ-ಮುತ್ತ ಶನಿವಾರ ರಾತ್ರಿ 13 ವಿದ್ಯುತ್ ಕಂಬಗಳು ಧರೆಗುರುಳಿವೆ. ಚೆಸ್ಕಾಂ ಸಿಬ್ಬಂದಿಗಳು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.