ಡೈಲಿ ವಾರ್ತೆ : 02 ಮೇ 2022

✍️ಅದ್ದಿ ಬೊಳ್ಳೂರು

ಉಮ್ಮಾ.. ಪೆರ್ನಾಲ್(ಈದ್ ಹಬ್ಬ) ನಾಳೆಯೇ ಆಗಬಹುದಲ್ಲವೇ..? ನಾಳೆ ಬೆಳಿಗ್ಗೆ ಬೇಗ ಏದ್ದೇಳಬೇಕು ಸ್ನಾನ ಮಾಡಬೇಕು ಹೊಸ ಬಟ್ಟೆ ಧರಿಸಬೇಕು ಕೈಗಳಿಗೆ ಬಳೆ ತೊಡಬೇಕು ಸ್ನೇಹಿತರ ಸಂಬಂಧಿಕರ ಮನೆಗೆಲ್ಲ ಹೋಗಿ ಅದನ್ನೆಲ್ಲಾ ತೋರಿಸಬೇಕು ನಾಳೆ ನಮಗೆಲ್ಲಾ ಖುಷಿಯೋ ಖುಷಿ ಅಲ್ವಾ ಉಮ್ಮಾ..? ಹಾಂ” ಆಗಲೇ ನನ್ನ ಹೊಸ ಉಡುಪುಗಳಿಗೆ ಇಸ್ತ್ರಿ ಹಾಕಿ ರೆಡೀ ಇಟ್ಟಿದ್ದೇನೆ ರಾತ್ರಿ ಗಂಟೆ ಎಂಟಾಯಿತು ಇನ್ನು ನನ್ನ ಕೈಗಳಿಗೆ ಮೆಹಂದಿ ಹಾಕ ಬೇಕಲ್ಲವೇ ತಂಗಿ ಫಾತಿಮಾಲಿಗೆ ನಾನೇ ಮೆಹಂದಿ ಹಾಕುತ್ತೇನೆ ನನಗೆ ಮಾತ್ರ ಉಮ್ಮಾ ನೀನೇ ಮೆಹಂದಿ ಹಾಕಬೇಕು ಆಯ್ತಾ..

ರೆಹನಾ” ಸ್ವಲ್ಪ ತಡಿ ಮಗಳೇ ಮಸೀದಿಯಲ್ಲಿ ಇನ್ನೂ ತಖ್ಬೀರ್ (ಚಂದ್ರ ದರ್ಶನದ ಮಾಹಿತಿ) ಮೊಳಗಿಲ್ಲ, ನಾಳೆನೇ ಪೆರ್ನಾಲ್ ಆಗುತ್ತದೆ ಎಂದು ಇನ್ನೂ ಖಚಿತವಾಗಿಲ್ಲ ಯಾವುದಕ್ಕೂ ಸ್ವಲ್ಪ ಕಾಯೋಣ ಮಗಳೇ.. ಅಷ್ಟರಲ್ಲಿ ತಂಗಿ ಫಾತಿಮಾ ಕೂಡ ಎದ್ದು ನಿಂತು ನನಗೆ ನಿದ್ದೆ ಬರುತ್ತಿದೆ, ರೆಹನಾ ದೀದಿ ಬೇಗ ನನಗೆ ಮೆಹಂದಿ ಹಾಕು, ಉಮ್ಮಾ.. ನಾನು ನಾಳೆ ಬೆಳಿಗ್ಗೆ ಸ್ನಾನ ಮಾಡಿ ಅಬೊಕೋರು ಮಾವ ಕೊಟ್ಟ ನೈಟ್ ಡ್ರೆಸ್ ಧರಿಸುತ್ತೇನೆ ಮಧ್ಯಾನ ಬಿರಿಯಾನಿ ಊಟ ಮಾಡಿದ ಮೇಲೆ ಅಪ್ಪ ಕೊಡಿಸಿದ ಚೂಡಿದಾರ್ ಧರಿಸಿ ನನ್ನ ಸ್ನೇಹಿತರ ಸಂಬಂಧಿಕರ ಮನೆಗೆಲ್ಲ ಹೋಗಿ ತೋರಿಸುತ್ತೇನೆ ಮತ್ತೆ ನಾಳೆ ನಾನು ಅದೂ-ಇದು… ಎನ್ನುವಷ್ಟರಲ್ಲಿ ನಮಾಜಿನಿಂದ ಎದ್ದುನಿಂತ ಅಪ್ಪನ ಘರ್ಜನೆಯ ಧ್ವನಿ ಕೇಳಿಸುತ್ತದೆ

‘ನಿಮಗೇನು ಅಷ್ಟೊಂದು ಅರ್ಜೆಂಟ್ ಹೊಸ ಬಟ್ಟೆ ಧರಿಸಲಿಕ್ಕೆ..? ಮಸೀದಿಯಲ್ಲಿ ಇನ್ನು ಕೂಡ ತಖ್ಬೀರ್ ಮೊಳಗಿಲ್ಲ ನಾಳೆ ಪೆರ್ನಾಲ್ ಹಬ್ಬ ಆಗದಿದ್ದರೆ ಏನಾಯ್ತು, ನಾಳಿದ್ದು ಆಚರಿಸೋಣ ಒಂದು ದಿವಸದ ಉಪವಾಸ ಹೆಚ್ಚಿಗೆ ಸಿಗುವುದಿಲ್ಲವೇ..? ಮೆಹಂದಿ-ಗಿಹಂದಿ ಎಲ್ಲಾ ನಾಳೆ ನೋಡುವ ಈಗ ಹೋಗಿ ಮಲಗಿ ಬೇಗ’ ಅಪ್ಪನ ಘರ್ಜನೆಗೆ ತಂಗಿ ಫಾತಿಮಾ ಕಣ್ಣುಮುಚ್ಚಿ ಮಲಗಿದಂತೆ ನಾಟಕ ಮಾಡಿದರೆ ದೀದಿ ರೆಹನಾ’ ಕೈಯಲ್ಲಿ ಮೆಹಂದಿಯ ಪ್ಯಾಕೇಟನ್ನು ಹಿಡಿದುಕೊಂಡು ಬೇಸರದಿಂದಲೇ ತಾಯಿಯ ಮುಖ ನೋಡುತ್ತಾ ಮಲಗಲು ತಯಾರಾದಳು, ಅಷ್ಟರಲ್ಲಿ ಅಮ್ಮ’ ಇಬ್ಬರನ್ನೂ ಸಮಾಧಾನ ಪಡಿಸುತ್ತಾ ‘ಮಕ್ಕಳೇ ಮಸೀದಿಯಲ್ಲಿ ತಿರಾಬಿ (ರಂಜಾನ್ ತಿಂಗಳ ರಾತ್ರಿಯ ವಿಶೇಷ ಸಾಮೂಹಿಕ ಪ್ರಾರ್ಥನೆ) ಶುರುವಾಯಿತು ಇನ್ನು ನಾಳೆ ಪೆರ್ನಾಲ್ ನಡೆಯುವುದು ಕಷ್ಟ! ನೀವು ಹೋಗಿ ಮಲಗಿ, ಒಂದುವೇಳೆ ಚಂದ್ರ ದರ್ಶನವಾದ ವಿಷಯ ತಿಳಿದ ಕೂಡಲೇ ನಾನೇ ನಿಮ್ಮನ್ನು ಎಬ್ಬಿಸುತ್ತೇನೆ ಎನ್ನುತ್ತಾ ಹಬ್ಬದ ದಿನಕ್ಕೆಂದು ಒಲೆಯಲ್ಲಿ ಇಟ್ಟ ಮೂಡೆ-ಇಡ್ಲಿ ಬೆಂದಿದೆಯ ಎಂದು ನೋಡಲು ಅಡುಗೆ ಕೋಣೆಯ ಕಡೆ ನಡೆದಳು, ಅಪ್ಪ ಕೂಡಾ ನಮಾಜಿನ ಟೋಪಿಯನ್ನು ಕೈಯಲ್ಲಿ ಹಿಡಿದು ಮಸೀದಿಯ ಕಡೆ ಹೊರಟುಹೋದರು

ರಾತ್ರಿ ಸುಮಾರು ಹತ್ತು ಗಂಟೆ ಆಯಿತು ಮಸೀದಿಯಲ್ಲಿ ತಿರಾಬಿ ನಮಾಜು ಮುಗಿದು ಅಪ್ಪ ಮನೆಗೆ ಬಂದು ಊಟ ಮಾಡುತ್ತಿರಬೇಕಾದರೆ ಪಕ್ಕದ ಮಸೀದಿಯ ಮೈಕ್ ನಲ್ಲಿ ತಕ್ಬೀರ್ ಶಬ್ಧ ಕೇಳಿಸತೊಡಗಿತು

*”ಅಲ್ಲಾಹು ಅಕ್ಬರ್ ಅಲ್ಲಾಹ್.. ಅಕ್ಬರ್ ಅಲ್ಲಾಹು ಅಕ್ಬರ್’ ಲಾ..ಇಲಾಹ ಇಲ್ಲ್- ಅಲ್ಲಾಹು ಅಕ್ಬರ್….*

ಅಡುಗೆ ಮನೆಯಿಂದ ಓಡಿಬಂದ ತಾಯಿ *”ಅಲ್ ಹಮ್ದುಲಿಲ್ಲಾಹ್..* (ಸೃಷ್ಟಿಕರ್ತನಿಗೆ ಕೃತಜ್ಞತೆಗಳು) ಎನ್ನುತ್ತಾ ‘ರೀ ಚಂದ್ರ ದರ್ಶನ ಆಯಿತು ಅಂತ ಕಾಣುತ್ತೆರೀ.. ಮಸೀದಿಯಲ್ಲಿ ತಖ್ಬೀರ್ ಮೊಳಗುತಿದೆ ನಾಳೆ ದಿನ ಪೆರ್ನಾಲ್ ಅನ್ನುವುದು ನಿರ್ಧಾರವಾಯಿತು.. ಎನ್ನುತ್ತಾ ಪಕ್ಕದ ಕೋಣೆಯಲ್ಲಿ ಮೆಹಂದಿ ಪ್ಯಾಕೆಟನ್ನು ಕೈಯಲ್ಲೇ ಹಿಡಿದುಕೊಂಡು ನಿದ್ದೆಗೆ ಜಾರಿದ ಮಕ್ಕಳನ್ನು ಎಬ್ಬಿಸುವ ಪ್ರಯತ್ನದಲ್ಲಿ..

ಮಗಳೇ ರೆಹನಾ.. ಎದ್ದೇಳು ಮಗಳೇ ಮಸೀದಿಯಲ್ಲಿ ತಕ್ಬೀರ್ ಮೊಳಗುತ್ತಿದೆ ನಾಳೆನೇ ಪೆರ್ನಾಲ್ ನಿಮ್ಮ ಕೈಗಳಿಗೆ ಮೆಹಂದಿ ಹಾಕಬೇಕಲ್ಲವೇ ಮಗಳೇ ಫಾತಿಮಾ.. ಎದ್ದೇಳು ಪುಟ್ಟಾ ಎಂದು ತಾಯಿ ಅದೆಷ್ಟು ಎಬ್ಬಿಸುವ ಪ್ರಯತ್ನಪಟ್ಟರೂ ನಿದ್ದೆಗೆ ಜಾರಿದ ಮಕ್ಕಳು ಕಣ್ಣು ತೆರೆಯಲೇ ಇಲ್ಲ. ತಂದೆಯು ಕೂಡ ಒಂದೆರಡು ಬಾರಿ ಮಕ್ಕಳ ಹೆತಸರೆತ್ತಿ ಕರೆಯುತ್ತಾ ‘ಇರಲಿ ಬಿಡೇ ನಾಳೆ ಬೆಳಿಗ್ಗೆ ಬೇಗನೆ ಎದ್ದು ಮೆಹಂದಿ ಹಾಕಿದರಾಯಿತು ಎಂದು ಬಾಯಿ ಆಕಳಿಸುತ್ತಾ ಹಾಸಿಗೆಗೆ ತಲೆ ಚಾಚಿದರು, ‘ಎಲ್ಲಾ ನೀವೇ ಮಾಡಿದ್ದು, ಪಾಪ ಮಕ್ಕಳು ಮೆಹಂದಿ ಹಾಕಿ ಮಲಗುತ್ತಿದ್ದರು ನಿಮ್ಮ ಬೊಬ್ಬೆ ಕೇಳಿ ಹೆದರಿ ಹಾಗೆ ಮಲಗಿಬಿಟ್ಟರು ಎಂದು ಬೇಸರದಿಂದಲೇ ತಂದೆಗೆ ಗುಸುಗುಸು ಬಯ್ಯುತ್ತಾ ಒಲೆಯಲ್ಲಿಟ್ಟಿದ್ದ ಇಡ್ಲಿ-ಮೂಡೆಯ ಪಾತ್ರೆಯನ್ನು ಕೆಳಗಿಳಿಸಿ ನಾಳೆ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಲು ನೀರು ಕಾಯಿಸಬೇಕಿದೆ ಎಂದು ಮನದಲ್ಲೆ ನೆನೆದು ತಾನೂ ಕೂಡ ಕೋಣೆಗೆ ತೆರಳಿ ಮಕ್ಕಳ ಪಕ್ಕದಲ್ಲೇ ಮಲಗಿಕೊಂಡಳು ತಾಯಿ.

ಮುಂಜಾನೆ ಮಸೀದಿಯ ಆಝಾನ್ ಧ್ವನಿಗೆ ಎಚ್ಚರಗೊಂಡ ತಂದೆ, ಆದಾಗಲೇ ತನಗಿಂತ ಮೊದಲೇ ಎದ್ದು ನೀರು ಕಾಯಿಸಲು ಒಲೆ ಉರಿಸುತ್ತಿದ್ದ ಮಡದಿಯನ್ನು ಕಂಡು ‘ಆಝಾನ್ ಆಯಿತು ನಾನು ಮಸೀದಿಗೆ ಹೋಗಿ ನಮಾಝ್ ಮಾಡಿ ಬರುತ್ತೇನೆ ಅಷ್ಟರಲ್ಲಿ ಮಕ್ಕಳನ್ನು ಎಬ್ಬಿಸಿ ನಮಾಝ್ ಮಾಡಿಸು ಬಳಿಕ ಕೈಗಳಿಗೆ ಮೆಹಂದಿ ಹಾಕಲಿ, ಬರುವಾಗ ಪಿತರ್ ಝಖಾತಿನ (ರಂಜಾನ್ ತಿಂಗಳ ಪೂರ್ತಿ ಉಪವಾಸದ ಕುರಿತು ಕಡ್ಡಾಯವಾಗಿ ಕುಟುಂಬದ ಪ್ರತಿಯೊಂದು ಸದಸ್ಯನ ಮೇಲೆ ಇಂತಿಷ್ಟು ಎಂಬ ಲೆಕ್ಕಚಾರದಲ್ಲಿ ಬಡವರ ಮನೆಗಳಿಗೆ ದಾನ ನೀಡುವ ಆಹಾರ ಸಾಮಗ್ರಿಗಳು) ಅಕ್ಕಿ ತರುತ್ತೇನೆ ಆದಷ್ಟು ಬೇಗ ನೆರೆಹೊರೆಯ ಬಡವರ ಮನೆಗಳಿಗೆ ತಲುಪಿಸು ಎಂದು ಹೇಳುತ್ತಾ ಅಪ್ಪ ಮಸೀದಿಯ ಕಡೆ ಹೆಜ್ಜೆಯಿಟ್ಟರು. ಇತ್ತ ಹಬ್ಬದ ಚಿಂತೆಯಲ್ಲಿ ನಿದ್ದೆಗೆ ಜಾರಿದ ರೆಹನಾ ಅಪ್ಪನ ಏರು ಧ್ವನಿಯ ಮಾತುಗಳು ಕಿವಿಗೆ ಬಿದ್ದಂತೆ ಎಚ್ಚರಗೊಂಡು ‘ಉಮ್ಮಾ.. ಉಮ್ಮಾ.. ಎಲ್ಲಿದ್ದೀಯಾ.. ಎನ್ನುವಷ್ಟರಲ್ಲಿ ತಾಯಿ ನಗುತ್ತಲೇ ‘ನಿನ್ನೆ ರಾತ್ರಿನೇ ಚಂದ್ರದರ್ಶನ ಆಗಿದೆ ಮಗಳೇ ಇವತ್ತು ಪೆರ್ನಾಲ್ ಹಬ್ಬ ಹೋಗಿ ಫಾತಿಮಾಳನ್ನು ಎಬ್ಬಿಸು ಬೇಗ ನಮಾಝ್ ಮಾಡಿ ಬನ್ನಿ ನಿಮ್ಮ ಕೈಗಳಿಗೆ ಚಂದದ ಮೆಹಂದಿ ಹಾಕಬೇಕಿದೆ ಎಂದೊಡನೆ ರೆಹನಾ ಕೊಣೆಯ ಕಡೆ ಓಡಿಹೋಗಿ ಮಲಗಿದ್ದ ತಂಗಿ ಫಾತಿಮಾಳನ್ನು ಎಬ್ಬಿಸಿ ಹಬ್ಬದ ವಿಷಯ ತಿಳಿಸಿದ ಮಾತ್ರಕ್ಕೆ ಫಾತಿಮಾಳ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾತ್ರಿ ಇಸ್ತ್ರಿ ಮಾಡಿ ಮೇಲೆ ತೂಗಿಟ್ಟಿದ್ದ ಹೊಸ ಬಟ್ಟೆಯ ಕಡೆ ಒಂದು ಬಾರಿ ಕಣ್ಣಾಡಿಸಿ ಬೆಳಗಿನ ನಮಾಜು ಮುಗಿಸಿ ಮೆಹಂದಿ ಇಟ್ಟು ಬಿಸಿನೀರಿನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸಿ, ಕುಟುಂಬ, ಗುರುಹಿರಿಯರು, ಸ್ನೇಹಿತರೊಂದಿಗೆ ಈದ್ ಶುಭಾಶಯಗಳನ್ನು ವಿನಿಮಯ ಮಾಡುವುದರ ಜೊತೆಗೆ ಅಕ್ಕಪಕ್ಕದ ಇತರ ಧರ್ಮದ ಮನೆಯವರಿಗೆ ಸಿಹಿತಿಂಡಿಗಳನ್ನು ಹಂಚಿ ಸಂಭ್ರಮಿಸುತ್ತಾ ಊರಿನ ಮಸೀದಿ, ಮನೆ-ಮನದಲ್ಲಿ ರಂಝಾನ್ ಈದ್ ಹಬ್ಬದ ಪೆರ್ನಾಲ್ ಸಡಗರವು ಸಂತೋಷದ ವಾತಾವರಣ ಸೃಷ್ಟಿಮಾಡಿತು.

ಸರ್ವರಿಗೂ ಈದ್ ಅಲ್-ಫಿತ್ರ್ ಹಬ್ಬದ ಶುಭಾಶಯಗಳು