


ಡೈಲಿವಾರ್ತೆ:20/ಆಗಸ್ಟ್ /2026

ಬೆಂಗಳೂರಿಗೆ ತೆರಳುವುದಾಗಿ ಹೇಳಿ ನಿಗೂಢ ನಾಪತ್ತೆ: ಒಂದೇ ಕುಟುಂಬದ ನಾಲ್ವರಿಗಾಗಿ ತೀವ್ರ ಶೋಧ

ದಾವಣಗೆರೆ: ಷೇರು ಮಾರುಕಟ್ಟೆ ನಷ್ಟದಿಂದಾಗಿ ಸಾಲ ತೀರಿಸಲಾಗದೆ ಒಂದೇ ಕುಟುಂಬದ ನಾಲ್ವರು ಪತ್ರ ಬರೆದಿಟ್ಟು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಶಾಗಲೆ ಗ್ರಾಮದ ರಮೇಶ್ ಕುಮಾರ್ (38), ಅವರ ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣ (3) ಈ ನಾಲ್ವರು ನಾಪತ್ತೆಯಾದವರು ಎಂದು ತಿಳಿದು ಬಂದಿದೆ.
ಇವರು ಹಲವು ದಿನಗಳಿಂದ ಕುಟುಂಬದ ಯಾರ ಸಂಪರ್ಕಕ್ಕೂ ಸಿಗದಿರುವುದು ಆತಂಕಕ್ಕೆ ಕಾರಣವಾಗಿದ್ದು ಕುಟುಂಬಸ್ಥರಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ರಮೇಶ್ ಕುಮಾರ್ ಅವರು ಷೇರು ಹೂಡಿಕೆ ವ್ಯವಹಾರ ನಡೆಸುತ್ತಿದ್ದು, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ನಷ್ಟ ಉಂಟಾಗಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬದ ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಆ.14ರಂದು ಪೋಷಕರಿಗೆ ಕರೆ ಮಾಡಿದ್ದ ರಮೇಶ್ ಕುಮಾರ್, ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದರು. ಕಾರು, ಬೈಕ್ ಮನೆಯ ಬಳಿಯೇ ಬಿಟ್ಟು ಆಟೋದಲ್ಲಿ ನಾಲ್ವರು ನಗರದ KSRTC ಬಸ್ ನಿಲ್ದಾಣಕ್ಕೆ ಹೋಗಿದ್ದರು. ಬಳಿಕ ರಮೇಶ್ ಕುಮಾರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಅಂದಿನಿಂದ ನಾಲ್ವರೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಸಂಬಂಧಿಕರು ಹಾಗೂ ಪರಿಚಿತರ ಮನೆಗಳಲ್ಲಿಯೂ ವಿಚಾರಿಸಿದರೂ ಯಾವುದೇ ಸುಳಿವು ದೊರೆತಿಲ್ಲ. ಇದರಿಂದ ಆತಂಕಗೊಂಡು ರಮೇಶ್ ಕುಮಾರ್ ಸಂಬಂಧಿಕರು ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದು, ರಮೇಶ್ ಕುಟುಂಬವನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
ರಮೇಶ್ ಕುಮಾರ್ ಬರೆದಿಟ್ಟ ಪತ್ರ ಲಭ್ಯ:
ಇನ್ನು ರಮೇಶ್ ಕುಮಾರ್ ಬರೆದಿಟ್ಟ ಪತ್ರ ದೊರೆತಿದ್ದು ನಾವು ಬಹಳ ಸಾಲ ಮಾಡಿಕೊಡಿದ್ದೇವೆ ಆದರೆ ಯಾರಿಗೂ ಅನ್ಯಾಯ ಮಾಡಿಲ್ಲ. ಸಾಲಾ ತಿರಿಸಲು ಆಗದ ಕಾರಣ ನಾವು ದೂರ ಹೋಗುತ್ತಿದ್ದೇವೆ. ನಮ್ಮನ್ನು ಹುಡುಕ ಬೇಡಿ, ನಮ್ಮಿಂದ ಸಂಬಂಧಿಕರ ಹೆಸರು ಹಾಳಾಗಬಾರದು. ಹೀಗಾಗಿ ದೂರ ಹೋಗುತ್ತಿದ್ದೇವೆ ಎಂದು ಮನೆಯಲ್ಲಿ ಬರೆದಿಟ್ಟು ಹೋದ ಪತ್ರ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.