ಡೈಲಿವಾರ್ತೆ:20/ಆಗಸ್ಟ್ /2026

ಬಂಟ್ವಾಳ: ಹಾಡಹಗಲೇ ಬೈಕ್ ಅಡ್ಡಗಟ್ಟಿ ತಲವಾರು ತೋರಿಸಿ ದರೋಡೆ – ವ್ಯಾಪಾರಿಯ ರೂ.8 ಲಕ್ಷ ಎಗರಿಸಿದ ನಾಲ್ವರ ತಂಡ!

ಬಂಟ್ವಾಳ : ವ್ಯಾಪಾರದ ಹಣ ಸಂಗ್ರಹಿಸಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸಂಸ್ಥೆಯೊಂದರ ನೌಕರನನ್ನು ಹಾಡಹಗಲೇ ತಡೆದು ತಲವಾರು ತೋರಿಸಿ ಬೆದರಿಸಿದ ನಾಲ್ವರ ತಂಡ ಸುಮಾರು 8 ಲಕ್ಷ ನಗದು ಹಣವನ್ನು ದರೋಡೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬಲ್ಲಿ ವರದಿಯಾಗಿದೆ.

ಅಡ್ಯಾರ್ – ಕಣ್ಣೂರು ಮೂಲದ ಸಿಮೆಂಟ್ ಹಾಗೂ ಕಬ್ಬಿಣ ಮಾರಾಟ ಸಂಸ್ಥೆಯ ಉದ್ಯೋಗಿ ಮಯ್ಯದಿ (40)ಎಂಬಾತ ದರೋಡೆಗೊಳಗಾದ ವ್ಯಕ್ತಿ.

ಈತ ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿಧ ಅಂಗಡಿಗಳಿಂದ ಹಣ ವಸೂಲಿ ಮಾಡಿಕೊಂಡು ಕಕ್ಕೆಪದವು ನಿಂದ ಬಂಟ್ವಾಳ ಕಡೆಗೆ ತೆರಳುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರ ತಂಡ ನಿರ್ಜನ ಪ್ರದೇಶದಲ್ಲಿ ಈ ದರೋಡೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣಾ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.