ಡೈಲಿವಾರ್ತೆ:20/ಆಗಸ್ಟ್ /2026

ಭದ್ರಾವತಿ: ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಅಡಿಕೆ ತೋಟಕ್ಕೆ ನುಗ್ಗಿದ ಖಾಸಗಿ ಬಸ್‌ – ಓರ್ವ ಸಾವು, 15 ಮಂದಿಗೆ ಗಾಯ

ಶಿವಮೊಗ್ಗ: ಖಾಸಗಿ ಬಸ್ಸೊಂದು ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಡಿಕೆ ತೋಟಕ್ಕೆ ನುಗ್ಗಿದ ಘಟನೆ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಸಮೀಪ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ ರಾಜಪ್ಪ(44) ಎಂದು ಗುರುತಿಸಲಾಗಿದೆ.
ಅಲ್ಲದೆ ಈ ಅಪಘಾತದಲ್ಲಿ ಬಸ್ಸಿನಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಖಾಸಗಿ ಬಸ್ ಭದ್ರಾವತಿಯಿಂದ ಚನ್ನಗಿರಿ ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಅಡ್ಡ ಬಂದಿದ್ದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್‌ ಚಾಲಕ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿ ರಸ್ತೆ ಬದಿ ಇದ್ದ ಅಡಿಕೆ ತೋಟಕ್ಕೆ ನುಗ್ಗಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಬಸ್‌ನಲ್ಲಿದ್ದ ಗಾಯಾಳುಗಳನ್ನು ಹೊರತೆಗೆಯಲು ನೆರವಾಗಿದ್ದಾರೆ.
ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನನ್ನು ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ದೃಢಪಡಿಸಿದ್ದಾರೆ.

ಗಾಯಗೊಂಡ ಪ್ರಯಾಣಿಕರನ್ನು ಶಿವಮೊಗ್ಗ
ಹಾಗೂ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಂಭೀರ ಗಾಯಗೊಂಡ ಬಾಲಕನೋರ್ವನನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ದೊರೆತ ತಕ್ಷಣ ಭದ್ರಾವತಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.