


ಡೈಲಿವಾರ್ತೆ:21/ಆಗಸ್ಟ್ /2026

ಚಿತ್ರದುರ್ಗ: ಬೆಂಗಳೂರಿಗೆ ತೆರಳುತ್ತಿದ್ದ ಟೂರಿಸ್ಟ್ ಬಸ್ ಪಲ್ಟಿ – ಇಬ್ಬರು ಸಾವು, ಓರ್ವ ಗಂಭೀರ, 20 ಮಂದಿಗೆ ಗಾಯ!

ಚಿತ್ರದುರ್ಗ: ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಗಂಭೀರ ಗಾಯ ಗೊಂಡ ಘಟನೆ ಆ. 21 ರಂದು ಶುಕ್ರವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ಸಂಭವಿಸಿದೆ.
ಮೃತರನ್ನು ಬಸ್ ಚಾಲಕ ಗುರುಪ್ರಸಾದ್ ಹಾಗೂ ಕ್ಲೀನರ್ ಶಂಕರ್ ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಪ್ರಯಾಣಿಕ ನರ್ಸಿಂಗ್ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಿಕೆರೆಯ ಖಾಸಗಿ ನರ್ಸಿಂಗ್ ಕಾಲೇಜಿನ ಕೇರಳ ಮೂಲದ 53 ವಿದ್ಯಾರ್ಥಿನಿಯರು ಕಳೆದ ಆಗಸ್ಟ್ 16ರಂದು ಐಲ್ಯಾಂಡ್ ಬಸ್ಸಿನಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಗೋವಾದಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಐಮಂಗಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಭಾಗದ ಟ್ರೆಂಚ್‌ಗೆ ಬಸ್ ಬಿದ್ದಿದ್ದು ಬಸ್ ಸಂಪೂರ್ಣವಾಗಿ ಜಖಂಗೊಂಡಿದೆ.
ಬಸ್ ಚಾಲಕನ ನಿದ್ದೆ ಮಂಪರಿನಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಅಪಘಾತದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್‌ನ್ನು ಮೇಲೆತ್ತಿದ್ದಾರೆ.