


ಡೈಲಿವಾರ್ತೆ:21/ಆಗಸ್ಟ್ /2026

ಮನೆಯ ವೆಂಟಿಲೇಟರ್ ಮೂಲಕ ಒಳನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು: ಇಬ್ಬರು ಅಪ್ರಾಪ್ತ ಬಾಲಕರ ಬಂಧನ!

ಭದ್ರಾವತಿ: ಮನೆಯ ಅಡುಗೆ ಕೋಣೆಯ ವೆಂಟಿಲೇಟರ್ ಮೂಲಕ ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಇಬ್ಬರು ಅಪ್ರಾಪ್ತ ಬಾಲಕರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಡಸ ಗ್ರಾಮದ ಮನೆಯೊಂದರಲ್ಲಿ ಆಗಸ್ಟ್ 17ರಂದು ಕಳ್ಳತನ ನಡೆದಿತ್ತು. ಮನೆಯವರು ಇಲ್ಲದ ಸಮಯವನ್ನು ಗಮನಿಸಿದ ಕಳ್ಳರು ಅಡುಗೆ ಮನೆಯ ವೆಂಟಿಲೇಟರ್ ಮೂಲಕ ಮನೆಯೊಳಗೆ ಪ್ರವೇಶಿಸಿ, ಒಟ್ಟು ₹6.39 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದರು. ತನಿಖೆಯ ವೇಳೆ ಲಭ್ಯವಾದ ಮಾಹಿತಿ ಹಾಗೂ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆಗಸ್ಟ್ 19ರಂದು ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ಹಾಗೂ ತನಿಖೆಯ ಮುಂದುವರಿದ ಭಾಗವಾಗಿ ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದ ₹6,89,965 ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಯ ಸುರಕ್ಷತೆಯನ್ನೇ ಸವಾಲು ಹಾಕುವ ರೀತಿಯಲ್ಲಿ ವೆಂಟಿಲೇಟರ್ ಮೂಲಕ ಒಳನುಗ್ಗಿ ಕಳ್ಳತನ ನಡೆಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.