


ಡೈಲಿವಾರ್ತೆ:23/ಆಗಸ್ಟ್ /2026

ಮಗುವಿನ ಕಿರು ಆಟಕ್ಕೆ ತಂದೆಯ ಬದುಕೇ ಅಂತ್ಯ – ಟ್ರ್ಯಾಕ್ಟರ್ ಚಕ್ರದಡಿಗೆ ಸಿಲುಕಿ ತಂದೆ ದಾರುಣ ಸಾವು!

ಹಾಸನ: ಮೂರು ವರ್ಷದ ಮಗು ಆಟವಾಡುತ್ತಾ ಟ್ರ್ಯಾಕ್ಟರ್ ಕೀ ಆನ್ ಮಾಡಿದ ಪರಿಣಾಮ ತಂದೆಯ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ.
ಮೃತರನ್ನು ಯಶ್ವಂತ್ (37) ಎಂದು ಗುರುತಿಸಲಾಗಿದೆ.
ಯಶ್ವಂತ್ ಸಾರಿಗೆ ಸಂಸ್ಥೆಯ ನೌಕರರಾಗಿದ್ದು ಅರಕಲಗೂಡು ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಹೊಸ ಮನೆ ಕಟ್ಟಿಸುತ್ತಿದ್ದ ಯಶ್ವಂತ್, ವರಮಹಾಲಕ್ಷ್ಮೀ ಹಬ್ಬದ ದಿನದಂದು ಆರ್‌ಸಿಸಿಗಾಗಿ ಟ್ರಾಕ್ಟರ್‌ನಲ್ಲಿ ಸೆಂಟ್ರಿಂಗ್ ಸಾಮಾಗ್ರಿಗಳನ್ನು ತರಿಸಿದ್ದರು. ಈ ವೇಳೆ ಮಗುವನ್ನು ಆಟವಾಡಿಸುತ್ತಾ ಟ್ರ್ಯಾಕ್ಟರ್ ಮೇಲೆ ಕೂರಿಸಿದ್ದರು. ಮಗು ಆಟವಾಡುತ್ತ ಟ್ರ್ಯಾಕ್ಟರ್ ಕೀ ಆನ್ ಮಾಡಿದ್ದು, ಟ್ರ್ಯಾಕ್ಟರ್ ಏಕಾಏಕಿ ಮುಂದಕ್ಕೆ ಚಲಿಸಿದೆ.
ಮಗು ಕೆಳಗೆ ಬೀಳುತ್ತದೆ ಎಂದು ಗಾಬರಿಯಲ್ಲಿ, ರಕ್ಷಣೆಗೆ ಬಂದ ಯಶ್ವಂತ್ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.