


ಡೈಲಿವಾರ್ತೆ:23/ಆಗಸ್ಟ್ /2026

ಬೊಲೆರೊ ಪಿಕಪ್ ವಿದ್ಯುತ್ ಕಂಬಕ್ಕೆ ಡಿಕ್ಕಿ – ಮೂವರು ಮಹಿಳಾ ಕಾರ್ಮಿಕರು ಮೃತ್ಯು

ಯಾದಗಿರಿ: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಬೊಲೆರೊ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಾಯಗೊಂಡ ಘಟನೆ ಆ. 23 ರಂದು ಭಾನುವಾರ ಯಾದಗಿರಿ ಜಿಲ್ಲೆಯ ಶಹಪುರದಲ್ಲಿ ಸಂಭವಿಸಿದೆ.
ಮೃತರನ್ನು ಭಾಗ್ಯಶ್ರೀ (35), ಸತ್ತಮ್ಮ (30) ಮತ್ತು ಹಂಗಮ್ಮ (18) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ ಕಾರ್ಮಿಕರು ಮಿಡ್ನಾಲ್ ಮತ್ತು ಅದರ ಸುತ್ತಮುತ್ತಲಿನ ಹೊಲಗಳಲ್ಲಿ ಹತ್ತಿ ಬೆಳೆಯಿಂದ ಕಸ ತೆಗೆಯಲು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ, ಬೊಲೆರೊ ವಾಹನದಲ್ಲಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾಗ ಅತೀ ವೇಗದಲ್ಲಿ ಬರುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ವಾಹನದಲ್ಲಿದ್ದ ಮೂವರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಲ್ಲದೆ ಎಂಟು ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಎಂಟು ಕಾರ್ಮಿಕರನ್ನು ಶಹಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಅಪಘಾತ ಬಗ್ಗೆ ಮಾಹಿತಿ ತಿಳಿದ ತಕ್ಷಣ ಭೀಮ್ ರೈನ್ ಗಡ್ಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.