ಡೈಲಿ ವಾರ್ತೆ : 03 ಮೇ 2022

ಕಾಸರಗೋಡು: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಮಸೀದಿ ಪಕ್ಕದ ಬಾವಿಗೆ ಬಿದ್ದ ಘಟನೆ ಮಂಗಳವಾರ ಕಾಸರಗೋಡು ಬಳಿಯ ಪೂಚಕ್ಕಾಡ್ ಎಂಬಲ್ಲಿ ನಡೆದಿದ್ದು, ಸ್ಥಳೀಯರ ಸಾಹಸಮಯ ಕಾರ್ಯಾಚರಣೆಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರನ್ನು ರಕ್ಷಿಸಲಾಗಿದೆ.


ಉದುಮ ಭಾಗದಿಂದ ಬರುತ್ತಿದ್ದ ಕಾರೊಂದು ಪೂಚಕ್ಕಾಡ್ ಬಳಿ ಬೈಕೊಂದಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ರಸ್ತೆ ಪಕ್ಕದ ಬಾವಿಗೆ ಬಿದ್ದಿದೆ. ಕಾರಿನಲ್ಲಿ ಒಟ್ಟು ಮೂವರು ಯುವಕರು ಇದ್ದರು.



ಈದುಲ್ ಫಿತ್ರ್ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರು ಇದ್ದರು. ತಕ್ಷಣ ಕಾರ್ಯಾಚರಣೆಗೆ ಇಳಿದ ಯುವಕರು, ಹಗ್ಗದ ಸಹಾಯದಿಂದ ಬಾವಿಗಿಳಿದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಅವರಿಗೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕೂಡ ಸಾಥ್ ನೀಡಿದರು.