ಡೈಲಿ ವಾರ್ತೆ : 04 ಮೇ 2022

ಮೈಸೂರು : ದುರ್ಗಾಂಬಾ ದೇವಿಯ ಚಿನ್ನದ ಮಂಗಳಸೂತ್ರವನ್ನು ಕದ್ದು ಎಸ್ಟೇಪ್ ಆಗಿದ್ದ ಖದೀಮರು ಕೆಲ ದಿನಗಳ ನಂತರ ತಪ್ಪು ಕಾಣಿಕೆ ಸಮೇತ ವಾಪಸ್ಸು ನೀಡಿದ ವಿಚಿತ್ರ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಪ್ಪು ಮಾಡಿದ ನಮಗೆ ದೇವಿ ಶಾಪ ನೀಡುತ್ತಾಳೆ ಎಂದು ದೇವಿಯ ತಾಳಿ ಕದ್ದಿದ್ದ ಕಳ್ಳರಿಗೆ ಪಶ್ಚಾತ್ತಾಪವಾಗಿದೆ ಅನ್ಸುತ್ತೆ. ಹೀಗಾಗಿ 101 ರೂಪಾಯಿ ತಪ್ಪು ಕಾಣಿಕೆ ಸಮೇತ ತಾವು ಕಳ್ಳತನ ಮಾಡಿದ್ದ ಮಂಗಳಸೂತ್ರವನ್ನು ದುರ್ಗಾಂಬಾ ದೇವಿಯ ದೇವಸ್ಥಾನದಲ್ಲಿ ವಾಪಸ್ ಇಟ್ಟು ಹೋಗಿದ್ದಾರೆ.

ಕಳೆದ ವಾರ ದೇವಸ್ಥಾನದಲ್ಲಿ ಇಟ್ಟಿದ್ದ ಹುಂಡಿ ಲಟಾಯಿಸಲು ಬಂದಿದ್ದ ಖದೀಮರು ದೇವಿಯ ತಾಳಿಯನ್ನೂ ಎತ್ತಾಕ್ಕೊಂಡು ಹೋಗಿದ್ದರು.

ಈ ಕುರಿತು ಗ್ರಾಮದ ಮುಖಂಡರು ಪೊಲೀಸರಿಗೆ ದೂರು ನೀಡಿ ನಂತರ 4 ದಿನ ದೇವಸ್ಥಾನದ ಬಾಗಿಲು ಮುಚ್ಚಿದ್ದರು. ಭಾನುವಾರ ಎಂದಿನಂತೆ ಬಾಗಿಲು ತೆರೆಯಲು ಬಂದ ಅರ್ಚಕರಿಗೆ ಅಚ್ಚರಿ ಕಾದಿತ್ತು. ಕಳ್ಳರು ತಾವು ಕದ್ದಿದ್ದ ತಾಳಿಯನ್ನು 100 ರೂಪಾಯಿ ನೋಟಿನಲ್ಲಿ ಕಟ್ಟಿ ದೇವಸ್ಥಾನದ ಮುಂದೆ ಇಟ್ಟು ಹೋಗಿದ್ದಾರೆ.