


ಡೈಲಿವಾರ್ತೆ:27/ಆಗಸ್ಟ್ /2026

ಪುತ್ತೂರು: ಓಮಿನಿ ಕಾರು ಕದ್ದು ಆಂಬುಲೆನ್ಸ್ ಮಾಡಿದ ಖದೀಮರು – ನಾಲ್ವರು ಅಂತರರಾಜ್ಯ ಕಳ್ಳರ ಬಂಧನ

ಪುತ್ತೂರು: ಓಮಿನಿ ಕಾರು ಕದ್ದು ಆಂಬುಲೆನ್ಸ್ ಮಾಡಿದ್ದ ಅಂತರರಾಜ್ಯ ಕಳ್ಳರ ಗ್ಯಾಂಗ್ ನ್ನು ಬಂಧಿಸಿದ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಜೂ. 19 ಮತ್ತು 20ರ ನಡುವೆಯಲ್ಲಿ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡ್ನೂರು ಕಾವು ಎಂಬಲ್ಲಿ ಓಮ್ನಿ ಕಾರೊಂದು ಕಳುವಾಗಿತ್ತು.
ಈ ಸಂಬಂಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಸಂಖ್ಯೆ 94/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಠಾಣಾ ಪ್ರಭಾರ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಗುಣಪಾಲ ಜೆ. ಮತ್ತು ಸುಷ್ಮಾ ಜಿ. ಭಂಡಾರಿ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ಆರಂಭಿಸಿ ತನಿಖಾ ತಂಡವು ಕೇರಳ ಹಾಗೂ ತಮಿಳುನಾಡಿನಲ್ಲಿ ಜಾಲ ಬೀಸಿ ನಾಲ್ವರು ಅಂತರರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕೇರಳದ ಕಾಸರಗೋಡು ನಿವಾಸಿಗಳಾದ ಅಬ್ದುಲ್ ಸಾಯಿಲ್ ಜೆ. (25), ಮಹಮ್ಮದ್ ಆಸೀಫ್ (25), ಮಹಮ್ಮದ್ ಸಿರಾಜ್ (28) ಮತ್ತು ತಮಿಳುನಾಡಿನ ಕರೂರು ನಿವಾಸಿ ಶಕ್ತಿವೇಲು ಜಿ. (24) ಎಂದು ಗುರುತಿಸಲಾಗಿದೆ.
ಆರೋಪಿಗಳು ಕದ್ದಿದ್ದ 2.5 ಲಕ್ಷ ರೂ. ಮೌಲ್ಯದ ಓಮಿನಿ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ 1 ಲಕ್ಷ ರೂ. ಮೌಲ್ಯದ ಕೆಟಿಎಂ (KTM) ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿಗಳು ಕದ್ದ ಓಮ್ನಿ ಕಾರನ್ನು ಮೊದಲು ಕೇರಳಕ್ಕೆ ಸಾಗಿಸಿ, ಬಳಿಕ ತಮಿಳುನಾಡಿಗೆ ತಂದು ಮಾರಾಟ ಮಾಡಿದ್ದು, ಅಲ್ಲಿ ಆ ಕಾರನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿರುವುದು ಬಯಲಾಗಿದೆ. ಆರೋಪಿಗಳ ವಿರುದ್ಧ ಈಗಾಗಲೇ ಕೇರಳದ ಬದಿಯಡ್ಕ ಮತ್ತು ವಿದ್ಯಾನಗರ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.