ಡೈಲಿವಾರ್ತೆ:27/ಆಗಸ್ಟ್ /2026

ಮುಳುಗಿದ ಪರ್ಸಿನ್ ಬೋಟ್‌ನ ಅವಶೇಷಗಳು ಕೋಟತಟ್ಟು ಸಮುದ್ರ ತೀರದಲ್ಲಿ ಪತ್ತೆ

ಕೋಟ: ಗಂಗೊಳ್ಳಿ ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಶ್ರೀ ಬಾಲಾಂಜನೇಯ ಹೆಸರಿನ ಪರ್ಸಿನ್ ಮೀನುಗಾರಿಕಾ ಬೋಟ್‌ ಸಮುದ್ರದಲ್ಲಿ ಮುಳುಗಿದ ಘಟನೆಗೆ ಸಂಬಂಧಿಸಿದಂತೆ, ಬೋಟ್‌ನ ಅವಶೇಷಗಳು ಗುರುವಾರ ಬೆಳಿಗ್ಗೆ ಕೋಟತಟ್ಟು ಗ್ರಾಮದ ಶಿರಿಸಿ ಮಾರಿಕಾಂಬಾ ದೇವಸ್ಥಾನ ಸಮೀಪದ ಸಮುದ್ರ ತೀರದಲ್ಲಿ ಪತ್ತೆಯಾಗಿವೆ.

ಬುಧವಾರ ಮಧ್ಯಾಹ್ನ ಗಂಗೊಳ್ಳಿ ಧಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌, ಧಕ್ಕೆಯಿಂದ ಅನತಿ ದೂರದಲ್ಲಿರುವ ಅಳಿವೆ ಸಮೀಪವೇ ಸಮುದ್ರದ ರಭಸಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ಬೋಟ್‌ನಲ್ಲಿದ್ದ 27 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದರು.

ಬೋಟ್‌ನ ತಳಭಾಗದ ಹಲಗೆಗಳು ಸಮುದ್ರದ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರಿಂದ ಬೋಟ್‌ಗೆ ನೀರು ನುಗ್ಗಿ ತ್ವರಿತವಾಗಿ ಮುಳುಗಡೆಯಾಗಿದೆ ಎನ್ನಲಾಗಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಈ ನಡುವೆ, ಮುಳುಗಿದ ಬೋಟ್‌ನ ಅವಶೇಷಗಳು ಗುರುವಾರ ಬೆಳಿಗ್ಗೆ ಕೋಟತಟ್ಟು ಶಿರಿಸಿ ಮಾರಿಕಾಂಬಾ ದೇವಸ್ಥಾನ ಸಮೀಪದ ಸಮುದ್ರ ತೀರಕ್ಕೆ ಅಲೆಗಳೊಂದಿಗೆ ತೇಲಿ ಬಂದಿದ್ದು, ಸ್ಥಳೀಯರ ಗಮನಕ್ಕೆ ಬಂದಿವೆ. ಕೂಡಲೇ ಸ್ಥಳೀಯರು ಬೋಟ್‌ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ.