


ಡೈಲಿವಾರ್ತೆ:30/ಆಗಸ್ಟ್ /2026

ಚಿಕ್ಕಮಗಳೂರಿನಲ್ಲಿ ಡಾಲ್ಡಾ, ರಾಸಾಯನಿಕದಿಂದ ನಾಟಿ ತುಪ್ಪ ದಂಧೆ ಬಯಲು: 30 ಕೆ.ಜಿಗೂ ಅಧಿಕ ತುಪ್ಪ ಪತ್ತೆ

ಚಿಕ್ಕಮಗಳೂರು: ಡಾಲ್ಡಾ ಹಾಗೂ ವಿವಿಧ ರಾಸಾಯನಿಕ ಪದಾರ್ಥಗಳನ್ನು ಬಳಸಿ ನಕಲಿ ನಾಟಿ ತುಪ್ಪ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ದಂಧೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.
ದಾಳಿಯಲ್ಲಿ ಸುಮಾರು 30 ಕೆ.ಜಿಗೂ ಅಧಿಕ ನಕಲಿ ತುಪ್ಪ ಪತ್ತೆಯಾಗಿದ್ದು, ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಡಾಲ್ಡಾ ಸೇರಿದಂತೆ ವಿವಿಧ ಪದಾರ್ಥಗಳನ್ನು ಬಳಸಿ ತುಪ್ಪದ ಮಾದರಿಯಲ್ಲಿ ಉತ್ಪನ್ನವನ್ನು ತಯಾರಿಸಿ ಅದನ್ನು ‘ನಾಟಿ ತುಪ್ಪ’ ಎಂದು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಆರೋಗ್ಯದೊಂದಿಗೆ ಆಟವಾಡುವ ರೀತಿಯಲ್ಲಿ ಈ ದಂಧೆ ನಡೆಯುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.
ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ದಾಳಿ ನಡೆಸುತ್ತಿದ್ದಂತೆ ದಂಧೆಯಲ್ಲಿ ತೊಡಗಿದ್ದ ಆರೋಪಿಗಳು ಮನೆಯ ಬಾಗಿಲು ಲಾಕ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ನಕಲಿ ತುಪ್ಪ ಹಾಗೂ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದು ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಇದೇ ಪ್ರದೇಶದಲ್ಲಿ ಕಳೆದ ವಾರವೂ ಪಾಳುಬಿದ್ದ ಮನೆಯೊಂದರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳ್ಳಾರಿ ಮೂಲದ ಒಂದೇ ತಂಡ ನಿರಂತರವಾಗಿ ಈ ರೀತಿಯ ನಕಲಿ ತುಪ್ಪ ತಯಾರಿಕೆ ಮತ್ತು ಮಾರಾಟದ ದಂಧೆಯಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.
ಘಟನೆ ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.