


ಡೈಲಿವಾರ್ತೆ:29/ಆಗಸ್ಟ್ /2026

ಮಂಗಳೂರು: ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ವಾರೆಂಟ್ ಆರೋಪಿಗಳ ಬಂಧನ

ಮಂಗಳೂರು: ಕಳೆದ ಹಲವು ವರ್ಷಗಳಿಂದ ಅಪರಾಧ ಪ್ರಕರಣಗಳಲ್ಲಿ ದಾಖಲಾಗಿ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಪ್ರತ್ಯೇಕ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮುವಾಚ್(45) ಮತ್ತು ಶ್ರೀನಿವಾಸ್(43) ಎಂದು ಗುರುತಿಸಲಾಗಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2006ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ (ಮೊ.ನಂ. 166/2006, ಕಲಂ 379 ಐಪಿಸಿ) ಸಂಬಂಧಿಸಿದಂತೆ, ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮುವಾಚ್ (45) ಎಂಬಾತನನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮೂಲತಃ ಉಳ್ಳಾಲದ ಮುಕ್ಕಚೇರಿಯವರಾಗಿದ್ದು ಹಾಲಿ ಕೇರಳದ ಕಣ್ಣೂರು ಜಿಲ್ಲೆಯ ಇರಿಕ್ಕೂರು ಪೆರುವಳತ್ ಪರಂಬುವಿನಲ್ಲಿ ವಾಸವಿದ್ದ. ಆರೋಪಿಯನ್ನು ಆಗಸ್ಟ್ 28, 2026ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ (ಅ.ಕ್ರ. 16/2012, ಕಲಂ 395 ಐಪಿಸಿ) ಆರೋಪಿಯಾಗಿದ್ದು, ಕಳೆದ 13 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಶ್ರೀನಿವಾಸ್ ಕೆ. ಅಲಿಯಾಸ್ ಶೀನಪ್ಪ ಅಲಿಯಾಸ್ ಶೀನ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವೇಣೂರು ಠಾಣೆಯ ಎಎಸ್‌ಐ ಬೆನ್ನಿಚನ್, ಹೆಚ್‌ಸಿ ಕೃಷ್ಣ, ಸಿಪಿಸಿ ಬಸವರಾಜ್ ಎಸ್.ಪಿ. ಹಾಗೂ ಸಿಪಿಸಿ ಮೋಹನ್ ಕುಮಾರ್ ಅವರಿದ್ದ ವಿಶೇಷ ಪೊಲೀಸ್ ತಂಡವು ವಿಜಯನಗರ ಜಿಲ್ಲೆಯ ಹರಪನಳ್ಳಿ ಕೊರಚರಟ್ಟಿ ಎಂಬಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.