ಡೈಲಿವಾರ್ತೆ:30/ಆಗಸ್ಟ್ /2026

ಕಾರವಾರ: ಅಂಜದೀವ್ ಸಮೀಪ ಮೀನುಗಾರಿಕೆ ಬೋಟ್ ಮುಳುಗಡೆ – 24 ಮೀನುಗಾರರ ರಕ್ಷಣೆ

ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗುತ್ತಿದ್ದ ವೇಳೆ ಅದರಲ್ಲಿದ್ದ 24 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರೆ ಬೋಟ್‌ಗಳ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ರಕ್ಷಿಸಿದ ಘಟನೆ ರವಿವಾರ ನಸುಕಿನ ವೇಳೆ ಅಂಜದೀವ್ ದ್ವೀಪದ ಸಮೀಪ ನಡೆದಿದೆ.

ಬೆಳ್ಳಂಬಾರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿ ಮುಳುಗಡೆಯಾಗಿತ್ತು. ವಿಷಯ ತಿಳಿದ ತಕ್ಷಣ ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳು ಸ್ಥಳಕ್ಕೆ ಧಾವಿಸಿ, ಬೋಟ್‌ನಲ್ಲಿದ್ದ ಎಲ್ಲಾ 24 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿವೆ.

ಮುಳುಗಡೆಯಾಗುತ್ತಿದ್ದ ಬೋಟ್‌ನ್ನು ಉಳಿಸಿಕೊಳ್ಳಲು ಇತರೆ ಬೋಟ್‌ಗಳಿಗೆ ಹಗ್ಗ ಕಟ್ಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ವಿಫಲವಾಗಿ ಸಮುದ್ರದಲ್ಲಿ ಮುಳುಗಡೆಯಾಗಿದೆ. ಅವಘಡದಿಂದ ಬೋಟ್ ಹಾಗೂ ಮೀನುಗಾರಿಕಾ ಪರಿಕರಗಳಿಗೆ ಸೇರಿ ಸುಮಾರು ₹80 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಬಹುದೆಂದು ಅಂದಾಜಿಸಲಾಗಿದೆ.

ಈ ಹಿಂದೆ ಕೂಡ ನೀಲಕಂಠ ಖಾರ್ವಿ ಅವರಿಗೆ ಸೇರಿದ ಬೋಟ್‌ಗಳು ಅವಘಡಕ್ಕೀಡಾಗಿ ಹಾನಿಯಾಗಿದ್ದವು ಎನ್ನಲಾಗಿದ್ದು, ಮತ್ತೆ ಸಂಭವಿಸಿರುವ ಈ ಘಟನೆ ಕುಟುಂಬಕ್ಕೆ ಭಾರೀ ಆರ್ಥಿಕ ಹೊಡೆತ ನೀಡಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ. ಬೋಟ್ ಮುಳುಗಡೆಯ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.