


ಡೈಲಿವಾರ್ತೆ:31/ಆಗಸ್ಟ್ /2026

ಶರಣ ತತ್ವ ಇಸ್ ದಿ ಬೆಸ್ಟ್: ಇಸ್ಲಾಂ ಧರ್ಮವೇ ಶ್ರೇಷ್ಠ ಎಂದು ಹೇಳಿ ಈಗ ಉಲ್ಟಾ ಹೊಡೆದ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟನೆ

ಕೊಪ್ಪಳ: ಇಸ್ಲಾಂ ಧರ್ಮದ ಕುರಿತು ಸಚಿವ ಬಸವರಾಜ ರಾಯರೆಡ್ಡಿ ನೀಡಿದ್ದ ಹೇಳಿಕೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಾವು ಯಾವುದೇ ಧರ್ಮವನ್ನು ಕಡಿಮೆ ಎಂದು ಹೇಳಿಲ್ಲ. ಎಲ್ಲ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸುವುದೇ ತಮ್ಮ ನಿಲುವು ಎಂದು ಅವರು ಹೇಳಿದ್ದಾರೆ.
ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿದ ಸಚಿವ ರಾಯರೆಡ್ಡಿ, ಸಾಂದರ್ಭಿಕವಾಗಿ ಮಾತನಾಡುವ ವೇಳೆ ಇಸ್ಲಾಂ ಧರ್ಮದಲ್ಲಿರುವ ಕೆಲವು ಉತ್ತಮ ವಿಚಾರಗಳ ಕುರಿತು ಪ್ರಸ್ತಾಪಿಸಿದ್ದೇನೆ. ಎಲ್ಲ ಧರ್ಮಗಳೂ ಶ್ರೇಷ್ಠವಾಗಿವೆ ಎಂದು ನಾನು ಹೇಳಿದ್ದೇನೆ. ಇಸ್ಲಾಂ ಧರ್ಮದಲ್ಲೂ ಉತ್ತಮ ಹಾಗೂ ಶ್ರೇಷ್ಠ ವಿಚಾರಗಳಿವೆ ಎಂದಿದ್ದೇನೆ ಹೊರತು, ಬೇರೆ ಯಾವುದೇ ಧರ್ಮವನ್ನು ಕಡಿಮೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ತಾವು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿ ಅಲ್ಲ ಎಂದು ಹೇಳಿದ ಅವರು, ಇಸ್ಲಾಂ, ಕ್ರೈಸ್ತ ಹಾಗೂ ಯಹೂದಿ ಧರ್ಮಗಳ ವಿಚಾರಧಾರೆಗಳ ಕುರಿತು ಅಧ್ಯಯನ ಮಾಡುವ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ವಿವಿಧ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಹಜ್ ಯಾತ್ರೆ ಕೈಗೊಳ್ಳುವ ಆಸೆಯೂ ಇದೆ. ಆದರೆ ಸದ್ಯ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಶರಣ ತತ್ವವೇ ಶ್ರೇಷ್ಠ:
ವಿವಾದದ ನಡುವೆಯೇ ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದ ರಾಯರೆಡ್ಡಿ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಶರಣ ತತ್ವವನ್ನು ಪ್ರಸ್ತಾಪಿಸಿದರು.
ಮನುಷ್ಯತ್ವ ಮತ್ತು ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಮುಖ್ಯ. ಧರ್ಮಗಳ ಹೆಸರಿನಲ್ಲಿ ಭಿನ್ನಾಭಿಪ್ರಾಯ ಬೆಳೆಸುವುದಕ್ಕಿಂತ ಅವು ಸಾರುವ ಉತ್ತಮ ಸಂದೇಶಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದರು.
ತಾವು ಮಠ-ಮಾನ್ಯಗಳಿಗೆ ನಿಯಮಿತವಾಗಿ ಭೇಟಿ ನೀಡುವುದಿಲ್ಲ. ಆದರೆ ತಮ್ಮೊಂದಿಗೆ ಇರುವವರು ಅಥವಾ ಕುಟುಂಬ ಸದಸ್ಯರು ಆಹ್ವಾನಿಸಿದಾಗ, ಅವರ ಒತ್ತಾಯದ ಮೇರೆಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಕುಕನೂರಿನ ಕಾರ್ಯಕ್ರಮದಲ್ಲಿ ಹೇಳಿದ್ದೇನು?
ಇದಕ್ಕೂ ಮೊದಲು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಯರೆಡ್ಡಿ, ಇಸ್ಲಾಂ ಧರ್ಮದಲ್ಲಿರುವ ಮಾನವೀಯ ಮೌಲ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತಾವು ಹೆಚ್ಚಾಗಿ ಮಠ ಮತ್ತು ಮಂದಿರಗಳಿಗೆ ಹೋಗುವುದಿಲ್ಲ. ಆದರೆ ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ಆಸೆ ಇದೆ. ಅವಕಾಶ ದೊರೆತರೆ ಖುರಾನ್ ಅಧ್ಯಯನ ಮಾಡಲು ಸಹ ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದರು.
ಇಸ್ಲಾಂ ಧರ್ಮವು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಆದರೆ ಅದರ ಕುರಿತು ಸಮಾಜದಲ್ಲಿ ಕೆಲವು ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ದೇವರು ನಿರಾಕಾರ ಎಂದು ಹೇಳುವ ಇಸ್ಲಾಂ ಧರ್ಮದಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ಯಾವುದೇ ಧರ್ಮವೂ ಕೆಟ್ಟದ್ದನ್ನು ಮಾಡಲು ಬೋಧಿಸುವುದಿಲ್ಲ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಧರ್ಮಗಳು ತಿಳಿಸುತ್ತವೆ ಎಂದು ಅವರು ಹೇಳಿದ್ದರು.
ಇಸ್ಲಾಂ ಧರ್ಮದ ಆಚರಣೆಗಳು ಹಾಗೂ ತತ್ವಗಳ ಕುರಿತು ಪ್ರಸ್ತಾಪಿಸಿದ್ದ ರಾಯರೆಡ್ಡಿ, ದಿನಕ್ಕೆ ಐದು ಬಾರಿ ನಮಾಜು, ರೋಜಾ ಆಚರಣೆ ಮತ್ತು ಜಕಾತ್‌ನಂತಹ ಪದ್ಧತಿಗಳು ಸಮಾಜದಲ್ಲಿ ಶಿಸ್ತು, ತ್ಯಾಗ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಸಾರುತ್ತವೆ ಎಂದು ಅಭಿಪ್ರಾಯಪಟ್ಟಿದ್ದರು.
ಆದರೆ ಅವರ ಈ ಹೇಳಿಕೆ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಇದೀಗ ಸ್ಪಷ್ಟನೆ ನೀಡಿರುವ ಸಚಿವ ರಾಯರೆಡ್ಡಿ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಬಾರದು. ಎಲ್ಲ ಧರ್ಮಗಳಲ್ಲಿರುವ ಉತ್ತಮ ವಿಚಾರಗಳನ್ನು ಗೌರವಿಸುವುದೇ ತಮ್ಮ ನಿಲುವು ಎಂದು ಪುನರುಚ್ಚರಿಸಿದ್ದಾರೆ.