ಡೈಲಿವಾರ್ತೆ:02/ಸೆ./2026

ಗಂಗೊಳ್ಳಿ ಅಳಿವೆಯಲ್ಲಿ ಮತ್ತೆ ಬೋಟ್ ದುರಂತ: ಆರು ಮೀನುಗಾರರ ರಕ್ಷಣೆ!

ಕುಂದಾಪುರ: ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮತ್ತೆ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಇತರ ಬೋಟ್‌ನ ಮೀನುಗಾರರು ಸಮಯಪ್ರಜ್ಞೆಯಿಂದ ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.

ಕಳೆದ ವಾರ ಇದೇ ಪ್ರದೇಶದಲ್ಲಿ ಪರ್ಸಿನ್ ಬೋಟ್ ಮುಳುಗಡೆಯಾದ ಬೆನ್ನಲ್ಲೇ ಮತ್ತೊಂದು ಬೋಟ್ ದುರಂತಕ್ಕೀಡಾಗಿರುವುದು ಮೀನುಗಾರರಲ್ಲಿ ಆತಂಕ ಮೂಡಿಸಿದೆ.

ಗಂಗೊಳ್ಳಿ ಬಂದರಿನಿಂದ ಬುಧವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಕುಂಭಾಶಿ ಕೊರವಡಿಯ ಸಂತೋಷ್ ಎ. ಅವರಿಗೆ ಸೇರಿದ ‘ಮಂಜುನಾಥ ಸಾಗರ’ ಎಂಬ ತ್ರಿಸೆವೆಂಟಿ ಬೋಟ್ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮುಳುಗಡೆಯಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸಮೀಪದಲ್ಲಿದ್ದ ಇತರೆ ಮೀನುಗಾರರು ತಕ್ಷಣವೇ ಪರ್ಸಿನ್ ಬೋಟ್ ಮೂಲಕ ಸಮುದ್ರಕ್ಕೆ ಧಾವಿಸಿದರು. ಅಪಾಯಕ್ಕೆ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಅವರು ಯಶಸ್ವಿಯಾದರು.
ನೀರಿನಲ್ಲಿ ಭಾಗಶಃ ಮುಳುಗುತ್ತಿದ್ದ ಬೋಟ್‌ನ್ನು ಮತ್ತೊಂದು ಬೋಟ್‌ನ ಸಹಾಯದಿಂದ ಎಳೆದು ಗಂಗೊಳ್ಳಿ ಬಂದರಿಗೆ ತರಲಾಯಿತು. ಆದರೆ ಬೋಟ್‌ನಲ್ಲಿದ್ದ ಮೀನುಗಾರಿಕಾ ಬಲೆಗಳು ಹಾಗೂ ಇತರೆ ಅಗತ್ಯ ಸಲಕರಣೆಗಳು ನೀರಿನಲ್ಲಿ ಹಾನಿಗೊಂಡಿದ್ದು ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.