ಡೈಲಿವಾರ್ತೆ:02/ಸೆ./2026

ವಿವಾದಕ್ಕೆ ಇತಿಶ್ರೀ: ಕುತ್ತಾರಿನಲ್ಲಿ ‘ಸೌಹಾರ್ದ ವೃತ್ತ’ ಲೋಕಾರ್ಪಣೆ
ಕೊರಗಜ್ಜನ ಪ್ರತಿಕೃತಿಯೊಂದಿಗೆ ಸರ್ವಧರ್ಮ ಸೌಹಾರ್ದದ ಸಂದೇಶ ರವಾನೆ

ಉಳ್ಳಾಲ: ರಸ್ತೆ ಮಧ್ಯದ ವೃತ್ತದ ನಾಮಕರಣ ವಿಚಾರವಾಗಿ ಕಳೆದ ಕೆಲವು ತಿಂಗಳುಗಳಿಂದ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕುತ್ತಾರು ಜಂಕ್ಷನ್‌ನಲ್ಲಿ ಕೊನೆಗೂ ಸೌಹಾರ್ದದ ಸಂದೇಶ ಸಾರುವ ನೂತನ ‘ಸೌಹಾರ್ದ ವೃತ್ತ’ ನಿರ್ಮಾಣಗೊಂಡಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಮಂಗಳವಾರ ರಾತ್ರಿ ವೃತ್ತವನ್ನು ಲೋಕಾರ್ಪಣೆ ಮಾಡಿದರು.

ಕಳೆದ ಮೇ ತಿಂಗಳಲ್ಲಿ ಕುತ್ತಾರು ಜಂಕ್ಷನ್‌ನಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ವೃತ್ತ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ವೃತ್ತಕ್ಕೆ ಕೊರಗಜ್ಜನ ಹೆಸರಿಡುವ ವಿಚಾರಕ್ಕೆ ಆಕ್ಷೇಪ ವ್ಯಕ್ತವಾಗಿ ವಿವಾದ ಉಂಟಾಗಿತ್ತು. ಈ ಸಂದರ್ಭದಲ್ಲಿ ಶಾಸಕ ಯು.ಟಿ. ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ಜುನೈದ್ ಹಾಗೂ ಆತನ ಸಹಚರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಆ ಎಲ್ಲಾ ವಿವಾದಗಳಿಗೆ ತೆರೆ ಎಳೆದಂತೆ ಕುತ್ತಾರು ಜಂಕ್ಷನ್‌ನಲ್ಲಿ ‘ಸೌಹಾರ್ದ ವೃತ್ತ’ ನಿರ್ಮಾಣಗೊಂಡಿದೆ. ವೃತ್ತದ ಮುಕುಟ ಭಾಗದಲ್ಲಿ ಕೊರಗಜ್ಜನ ಮುಟ್ಟಾಲೆ ಮತ್ತು ದಂಟೆಯ ಹೊಳಪಿನ ಪ್ರತಿಕೃತಿಯನ್ನು ಅಳವಡಿಸಲಾಗಿದ್ದು, ಸ್ಥಳೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಗಮನ ಸೆಳೆಯುತ್ತಿದೆ.
ವೃತ್ತದಲ್ಲಿ ಕೊರಗಜ್ಜನ ಆದಿಕ್ಷೇತ್ರ, ರಾಣಿಪುರ ಚರ್ಚ್ ಹಾಗೂ ಕುಂಡೂರು ಜುಮಾ ಮಸೀದಿಗೆ ತೆರಳುವ ಮಾರ್ಗಗಳನ್ನು ಸೂಚಿಸುವ ಫಲಕಗಳನ್ನೂ ಅಳವಡಿಸಲಾಗಿದೆ. ವಿವಿಧ ಧರ್ಮಗಳ ಆರಾಧನಾ ಕೇಂದ್ರಗಳತ್ತ ದಾರಿ ತೋರಿಸುವ ಈ ವ್ಯವಸ್ಥೆಯು ಸರ್ವಧರ್ಮ ಸೌಹಾರ್ದದ ಸಂದೇಶವನ್ನು ಸಾರುತ್ತಿದೆ.

ನೂತನ ವೃತ್ತವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್ ಧಾರ್ಮಿಕ ನಂಬಿಕೆಗಳು ದೌರ್ಬಲ್ಯವಲ್ಲ ಅವು ಈ ಮಣ್ಣಿನ ಶಕ್ತಿಯಾಗಿವೆ. ಎಲ್ಲಾ ಧರ್ಮಗಳ ಸಂದೇಶವೂ ಇನ್ನೊಬ್ಬರ ದೇಹದ ಗಾಯ ಮತ್ತು ಮನಸ್ಸಿನ ನೋವನ್ನು ಗುಣಪಡಿಸುವ ಔಷಧಿಯಂತಿದೆ. ಕುತ್ತಾರಿನಿಂದಲೇ ಇಡೀ ದೇಶಕ್ಕೆ ಸೌಹಾರ್ದದ ಸಂದೇಶ ರವಾನೆಯಾಗಬೇಕು. ಈ ವೃತ್ತವು ಕೇವಲ ಒಂದು ನಿರ್ಮಾಣವಾಗದೆ, ಸಹೋದರತೆ ಮತ್ತು ಪರಸ್ಪರ ಗೌರವದ ಪ್ರತೀಕವಾಗಬೇಕು ಎಂದು ಖಾದರ್ ಹೇಳಿದರು.

ಕುತ್ತಾರು ಪ್ರದೇಶದ ಅಭಿವೃದ್ಧಿ ಕಾರ್ಯಗಳು ಇಲ್ಲಿಗೆ ಸೀಮಿತವಾಗುವುದಿಲ್ಲ ಎಂದು ತಿಳಿಸಿದ ಅವರು ಕುತ್ತಾರಿನಿಂದ ಅಂಬ್ಲಮೊಗರು ಸಂಪರ್ಕಿಸುವ ರಸ್ತೆಯ ಅಗಲೀಕರಣ ಕಾಮಗಾರಿಗೂ ಚಾಲನೆ ನೀಡಲಾಗುವುದು ಎಂದರು. ಈ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಮೂರು ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಕುತ್ತಾರು ಸೌಹಾರ್ದ ಮತ್ತು ಸೋದರತೆಯ ಮಾದರಿ ಪ್ರದೇಶವಾಗಿ ರೂಪುಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದ ಖಾದರ್ ಉಳ್ಳಾಲಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಕೊರಗಜ್ಜನ ಕ್ಷೇತ್ರವೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುತ್ತಾರು ಪಂಜಂದಾಯ, ಬಂಟ, ವೈದ್ಯನಾಥ, ಆದಿ ಕೊರಗತನಿಯ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಬಿ. ಶ್ರೀಧರ ಶೆಟ್ಟಿ ಮಾಗಂದಡಿ, ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ಉಪಾಧ್ಯಕ್ಷ ಎಂ. ಮಹಾಬಲ ಹೆಗ್ಡೆ ದೆಬ್ಬೇಲಿ, ರತ್ನಾಕರ ಕಾವ ಕುತ್ತಾರ್ ಗುತ್ತು, ರಾಜಣ್ಣ ಬೋಳ್ಯಗುತ್ತು, ಪದ್ಮನಾಭ ಶೆಟ್ಟಿ ಗೇಣಿಮನೆ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿಶಾಲ್ ಹೆಗ್ಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಕಣಚೂರು ಮೋನು, ಮದನಿ ನಗರ ಜುಮಾ ಮಸೀದಿ ಅಧ್ಯಕ್ಷ ಅಝೀಝ್, ರಾಣಿಪುರ ಚರ್ಚ್ ಧರ್ಮಗುರು ಎರಿಕ್ ಕ್ರಾಸ್ತಾ ಹಾಗೂ ಕುತ್ತಾರು ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಅಧ್ಯಕ್ಷ ಪವಿತ್ರ ಗಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.